Advertisement
ಪ್ರತೀ ವರ್ಷ ಎಪ್ರಿಲ್ 2ರಂದು ನಾವು ವಿಶ್ವ ಆಟಿಸಂ ದಿನವಾಗಿ ಆಚರಿಸುತ್ತಾ ಬಂದಿದ್ದೇವೆ. ಈ ಸಮಸ್ಯೆಯಿಂದ ಬಳಲುವವರನ್ನು ಗುರುತಿಸಬೇಕಾದರೆ ಕೆಲವೊಂದು ಗುಣಲಕ್ಷಣಗಳನ್ನು ಗಮನಿಸಬಹುದು. ಈ ಸ್ವಲೀನತೆ ಇರುವವರಲ್ಲಿ ಸಾಮಾನ್ಯವಾಗಿ ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಆಗದೇ ಇರುವುದು, ಹಾಗೆ ಸಂವಹನ ವಿಚಾರವಾಗಿ ಸಮಸ್ಯೆಗಳು ಅಂದರೆ, ಅವರಿಗೆ ಭಾಷೆ ಬೆಳವಣಿಗೆ ವಯಸ್ಸಿಗೆ ತಕ್ಕಂತೆ ಆಗದೇ ಇರುವುದು, ನರಗಳ ಬೆಳವಣಿಗೆ ಅಥವಾ ನ್ಯೂನತೆ ಕಂಡುಬರುವುದು. ಇವುಗಳೊಟ್ಟಿಗೆ ಕೆಲವೊಮ್ಮೆ ವರ್ತನೆಯ ಸಮಸ್ಯೆಗಳು ಕೂಡ ಇರಬಹುದು. ಕೆಲವೊಮ್ಮೆ ಪದೇ, ಪದೇ ಹೇಳಿದ ಪದವನ್ನು ಪುನರಾವರ್ತಿತ ಮಾಡುವುದು. ಹಾಗೆಯೇ ಕೆಲವೊಂದು ವಿಚಾರಗಳಲ್ಲಿ ವಿಶೇಷ ಆಸಕ್ತಿಗಳು ಎಂದರೆ ಸಾಮಾನ್ಯವಾಗಿ ತಿರುಗುತ್ತಿರುವ ಗಾಡಿಗಳ ಚಕ್ರಗಳನ್ನೇ ದಿಟ್ಟಿಸಿ ನೋಡುವುದು ಅಥವಾ ಯಾವುದೇ ವಸ್ತುವನ್ನು ಅದರ ಪದರಗಳನ್ನು ಸ್ಪರ್ಷಿಸಿ ನೋಡುವುದು, ಆದಷ್ಟೇ ಅಲ್ಲದೇ ಅತಿಯಾದ ಶಬ್ಧಗಳಿಗೆ ಚೀರುವುದು ಅಥವಾ ಪರಿಸರದಲ್ಲಿ ಹೊಂದಿಕೊಳ್ಳಲು ತೊಂದರೆಯಾಗಬಹುದು.
Related Articles
Advertisement
ಇಂತಹ ಮಕ್ಕಳನ್ನು ಬೆಳೆಸುವಲ್ಲಿ ತಂದೆ, ತಾಯಿಯ ಜವಾಬ್ದಾರಿ ಬಹಳ. ಇದನ್ನು ಬಹಳವಾಗಿ 3 ವರ್ಷದ ಪ್ರಾಯದಲ್ಲಿ ಖಚಿತವಾಗಿ ಗುರುತಿಸಲಾಗುತ್ತದೆ. ಈ ರೀತಿ ಸೂಕ್ತ ಸಮಯದಲ್ಲಿ ಸ್ವಲೀನತೆ ದೃಢಪಡಿಸಿದಲ್ಲಿ ಮಕ್ಕಳಿಗೆ ಸರಿಯಾದ/ಸೂಕ್ತ ರೀತಿಯ ಚಿಕಿತ್ಸೆಗಳನ್ನು ನೀಡಬಹುದಾಗಿದೆ. ಈ ರೀತಿಯ ಮಕ್ಕಳಿಗೆ ಹಲವು ವಿಚಾರವಾಗಿ ಚಿಕಿತ್ಸೆಯ ಆವಶ್ಯಕತೆಯಿರುತ್ತದೆ. ಮಾತಿಗೆ ಸಂಬಂಧವಾಗಿ ಮಾತಿನ ಚಿಕಿತ್ಸೆ (Speech Therapy) ವರ್ತನೆ ಸಮಸ್ಯೆಯಿದ್ದಲ್ಲಿ ತಂದೆ, ತಾಯಿಗೆ ಆಪ್ತ ಸಮಾಲೋಚನೆ, ಕುಟುಂಬದವರೊಂದಿಗೆ (Family Therapy) ಔದ್ಯೋಗಿಕ ಚಿಕಿತ್ಸೆ (Occupasional Therapy) ಹಾಗೆಯೇ ಕೆಲವೊಮ್ಮೆ ಮಾತೇ ಮದ್ದು ಅವಶ್ಯಕತೆ ಇರಬಹುದು.
ಹೀಗೆ ತಂದೆ, ತಾಯಿ ಸೂಕ್ತ ಸಮಯದಲ್ಲಿ ಇಂತಹ ಮಗುವನ್ನು ಗುರುತಿಸಿ, ಚಿಕಿತ್ಸೆ ಕೊಡುತ್ತಾರೋ ಆಗ ಈ ಮಕ್ಕಳಲ್ಲಿರುವ ವಿಶೇಷವಾದ ಶಕ್ತಿಯನ್ನು ಕಂಡು ಹಿಡಿದು ತರಬೇತಿ ನೀಡಬಹುದಾಗಿದೆ. ಹೇಗೆ ಒಂದು ಮಗು ಆರೋಗ್ಯವಾಗಿದ್ದಾಗ ಶಾಲೆಯ ಅವಶ್ಯಕತೆ ಇರುತ್ತದೆಯೋ ಹಾಗೇ ಇಂತಹ ಮಕ್ಕಳಿಗೂ ಶಾಲೆಯ ಅವಶ್ಯಕತೆ ಹಾಗೂ ಪೋಷಕರ ಗಮನ ಅಗತ್ಯವಿದೆ. ಹೇಗೆ ದೈಹಿಕ ಕಾಯಿಲೆಗಳಿಗೆ ಒತ್ತು ಕೊಡುತ್ತೇವೆಯೋ ಹಾಗೆಯೇ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಮಗುವಿನ ಬೆಳವಣಿಗೆ ಉತ್ತಮವಾಗುತ್ತದೆ.
ಈ ರೀತಿಯ ಸಮಸ್ಯೆಗಳಿಂದ ಯಾರಾದರೂ ಬಳಲುತ್ತಿದ್ದರೆ ಅವರನ್ನು ಸೈಕಿಯಾಟ್ರಿ ಅಥವಾ ಕ್ಲಿನಿಕಲ್ ಸೈಕಾಲಜಿ ವಿಭಾಗದಲ್ಲಿ ತೋರಿಸಿ ಸೂಕ್ತ ಚಿಕಿತ್ಸೆ ನೀಡುವುದು ಒಳಿತು.
ಡಾ| ಶ್ವೇತಾ ಟಿ.ಎಸ್. ಸಹ ಪ್ರಾಧ್ಯಾಪಕರು ಕ್ಲಿನಿಕಲ್ ಸೈಕಾಲಜಿ ವಿಭಾಗ, ಕೆ.ಎಂ.ಸಿ., ಮಣಿಪಾಲ
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕ್ಲಿನಿಕಲ್ ಸೈಕಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು