ಕಲಬುರಗಿ: ಒತ್ತಡದ ಬದುಕಿನಲ್ಲಿ ಮಾನವ ಜೀವನ ಸಾಗಿಸುತ್ತಿದ್ದು, ಇತಿಮಿತಿಯಲ್ಲಿ ಬಾಳದೆ, ತನ್ನಲ್ಲಿರುವ ಅರಿವು ಮರೆತು ಅನುಕರಣೀಯ ಸಂಸ್ಕೃತಿ ಅಳವಡಿಸಿಕೊಂಡು ಕೊರತೆ ಎದುರಿಸುತ್ತಿದ್ದಾನೆ. ಆದ್ದರಿಂದ ಪ್ರತಿಯೊಬ್ಬರು ಸ್ವಯಂ ಅರಿವಿನ ಮೂಲಕ ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯ ಎಂದು ಮನೋಶಾಸ್ತ್ರಜ್ಞ ಡಾ| ಆರ್. ವೆಂಕಟರೆಡ್ಡಿ ಹೇಳಿದರು.
ನಗರದ ಸಾಯಿಮಂದಿರ ಬಳಿಯ ಕೊಹಿನೂರ ವಾಣಿಜ್ಯ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ
ಆರೋಗ್ಯ ದಿನಾಚರಣೆ ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಧುನಿಕ ಜೀವನ ಶೈಲಿ, ಕೌಟುಂಬಿಕ ತೊಂದರೆ, ಒತ್ತಡದ ಬದುಕು, ಮೌಡ್ಯತೆ, ಕೆಟ್ಟ ಅಭ್ಯಾಸಗಳಂತಹ ಅನೇಕ ಕಾರಣಗಳಿಂದ ವ್ಯಕ್ತಿ ಮಾನಸಿಕ ಖನ್ನತೆಗೆ ಒಳಗಾಗುತ್ತಿದ್ದಾನೆ. ಆದ್ದರಿಂದ ಇತ್ತೀಚೆಯ ಕೆಲ ವರ್ಷಗಳಲ್ಲಿ
ನಮ್ಮ ದೇಶದಲ್ಲಿ 10 ಸಾವಿರ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಾಸ್ತವಿಕತೆ ಮೇಲೆ ಜೀವನ ಸಾಗಿಸುವುದು, ಮೆದುಳಿನ ಸಂಪೂರ್ಣ ಬಳಕೆ, ಸೂಕ್ತ ಮಾರ್ಗದರ್ಶನ ಪಡೆದು ಖನ್ನತೆಯಿಂದ ಹೊರಬರಬೇಕು ಎಂದರು.
ಪ್ರತಿಯೊಬ್ಬರು ನಿರಂತರ ಪ್ರಯತ್ನ ಮಾಡಿ, ಸಾಧನೆಗೆ ಯತ್ನಿಸಿ. ಸೋಲನ್ನು ಒಪ್ಪಿಕೊಂಡು, ಒಣ ಪ್ರತಿಷ್ಠೆ ಬಿಡಿ. ದುಶ್ಚಟಗಳಿಂದ ದೂರವಿರಿ, ಗೊಂದಲಕ್ಕೆ ಆಸ್ಪದ ನೀಡಬೇಡಿ. ಮನಸ್ಸನ್ನು ನಿಯಂತ್ರಣದಲ್ಲಿಡುವ ಕ್ರಮ ಕೈಗೊಳ್ಳುವ ಮೂಲಕ ಮಾನಸಿಕ ಕಾಯಿಲೆಗೆ ತುತ್ತಾಗದಂತೆ ಇರಿ ಎಂದರು.
ಬಳಗದ ಅಧ್ಯಕ್ಷ ಎಚ್.ಬಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಹಣಮಂತರಾಯ ಕಂಟೆಗೋಳ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಅರುಣಕುಮಾರ ಚವ್ಹಾಣ, ಶರಣಯ್ಯ ರಾವೂರಮಠ, ಮನೀಶ ಪಾಟೀಲ, ಶಿಲ್ಪಾ ಖಂಡೇರಾವ್ ಹಾಗೂ ಕಾಲೇಜನ ಸಿಬ್ಬಂದಿ, ವಿದ್ಯಾರ್ಥಿಗಳು, ಬಳಗದ ಸದಸ್ಯರು ಭಾಗವಹಿಸಿದ್ದರು.