Advertisement

ಸವದತ್ತಿ: ಕಂದಮ್ಮಗಳ ಶಿಕ್ಷಣಕ್ಕೆ ಸಂಗೀತ ಸ್ಪರ್ಶ ನೀಡಿದ ಪಿಎಸ್‌ಐ.!

12:48 PM Jan 26, 2022 | Team Udayavani |

ಸವದತ್ತಿ: ಪೊಲೀಸ್ ಅರ್ಥ ರಕ್ಷಕ ಮತ್ತು ಕಾನೂನು ಪಾಲಕ. ಇವೆರಡರ ಜೊತೆಗೂ ಇಲ್ಲೊಂದು ಸಮಾಜಮುಖಿ ಕಾರ್ಯ ನಡೆದಿದೆ. ಸವದತ್ತಿ ಠಾಣೆಯ ಪೊಲೀಸ್ ಅಧಿಕಾರಿ ಕಾನೂನು ಪಾಲನೆ ಜೊತೆಗೆ ಸಂಗೀತ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತಾವೂ ಸಹ ಮುಂದಿದ್ದೇವೆಂದು ನಿಖರವಾಗಿ ತೋರಿಸಿ ಸಾರ್ವಜನಿಕ ವಲಯದಲ್ಲಿ ಅತೀವ ಪ್ರಂಶಸೆಗೆ ಪಾತ್ರರಾಗಿದ್ದಾರೆ.

Advertisement

ಸೂಕ್ಷ್ಮ ಸ್ವಭಾವದ ವ್ಯಕ್ತಿತ್ವವುಳ್ಳ ಇಲ್ಲಿನ ಪಿಎಸ್‌ಐ ಶಿವಾನಂದ ಗುಡಗನಟ್ಟಿ, ಶಿಕ್ಷಣ ಹಾಗೂ ಸಂಗೀತ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಬೆತ್ತದ ಜೊತೆಗೆ ಬಳಪ ಬಳಸುವ ಕಲೆಯನ್ನು ಇತರರಿಗೆ ಮಾದರಿಯಾಗಿರಿಸಿದ್ದಾರೆ.

ಪ್ರಕರಣದ ತನಿಖೆಗೆಂದು ಸೋಮವಾರ ತಾಲೂಕಿನ ಕುರುವಿನಕೊಪ್ಪ ತೆರಳಿದಾಗ ಆಕಸ್ಮಿಕ ಅಲ್ಲಿನ ಸರಕಾರಿ ಶಾಲಾ ಮಕ್ಕಳಿಗೆ ಜಾನಪದ ಹಾಡಿನೊಂದಿಗೆ ಪಾಠ ತಿಳಿಸಿ, ಕುಣಿದು ಮಕ್ಕಳನ್ನು ರಂಜಿಸಿದ್ದಾರೆ. ನುರಿತ ಶಿಕ್ಷಕರು ಹೇಳುವ ಪಾಠ ಒಂದೊಮ್ಮೆ ಮಕ್ಕಳಿಗೆ ಗೀಳೆನಿಸಬಹುದು. ಆದರೆ ಅಲ್ಪ ವೇಳೆಯಲ್ಲಿ ಕಂದಮ್ಮಗಳಿಗೆ ಸಂಗೀತಕ್ಕೆ ಭಾವನಾತ್ಮಕ ಸ್ಪರ್ಶ ನೀಡಿ ಹಾಡಿನ ಪ್ರತಿ ಪಾತ್ರವನ್ನು ಅಭಿನಯಿಸುವ ಮೂಲಕ ಮಕ್ಕಳನ್ನು ಸೆಳೆಯುವ ಕಾರ್ಯ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿ ಎಲ್ಲೆಡೆ ಇವರಿಗೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ.

ಮೊದಲು ಹುಕ್ಕೇರಿ ಠಾಣೆಯಲ್ಲಿನ ಸೇವೆ ಗಮನಿಸಿ ಪ್ರತಿಷ್ಠಿತ ಮುಖ್ಯಮಂತ್ರಿಗಳ ಪದಕ ಮುಡಿಗೇರಿಸಿಕೊಂಡಿದ್ದಾರೆ. ಅಪ್ಪಟ ಸಂಗೀತಪ್ರೀಯರಾದ ಇವರು ತಮ್ಮ ಪೇಸ್‌ಬುಕ್ ನಲ್ಲಿ ಹಲವಾರು ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಸಂಗೀತದ ಸದಭಿರುಚಿಯನ್ನು ಜನತೆಯೊಂದಿಗೆ ಹಂಚಿಕೊಂಡು ಸಾಧಕರ ಸಾಧನೆಗೆ ಮೆಟ್ಟಿಲನ್ನಾಗಿಸಿದ್ದಾರೆ.

ಮೂಲತಃ ತಾಲೂಕಿನ ಇಂಚಲ ಗ್ರಾಮದವರಾದ ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಪೂರ್ಣಗೊಳಿಸಿದ್ದಾರೆ. ಶಾಲಾವಧಿಯಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಬಾಚಿಕೊಂಡಿದ್ದಾರೆ. ಬಿ.ಎ ಪದವಿಧರರಾದ ಇವರು ಜಾನಪದ, ಭಾವಗೀತೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಹಲವು ವಾದ್ಯಗಳನ್ನು ಕರಗತ ಮಾಡಿಕೊಂಡಿರುವ ಇವರು ಬಿಡುವಿನ ಸಮಯದಲ್ಲಿ ಸಂಗೀತ ಮತ್ತು ಶಿಕ್ಷಣದಲ್ಲಿ ತಲ್ಲೀಣರಾಗುತ್ತಾರೆ. ಇವರು ಹಾಡಿದ ಮತ್ತು ನುಡಿಸಿದ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಕುರಿತು ಇಲಾಖಾಧಿಕಾರಿಗಳ ಶ್ಲಾಘನೆಗೆ ಪಾತ್ರರಾಗಿದ್ದಾರೆ.

Advertisement

ಪೊಲೀಸ್ ವ್ಯವಸ್ಥೆಯನ್ನು ಮಕ್ಕಳಿಗೆ ತಿಳಿಸಿ ಭಯದ ಬದಲಾಗಿ ಇಲಾಖೆ ರಕ್ಷಣೆಗಿದೆ ಎಂದು ತಿಳಿಸುವ ಉದ್ದೇಶ ನಮ್ಮದಾಗಿದೆ. ಜನಸ್ನೇಹಿ ವ್ಯವಸ್ಥೆ ಕಲ್ಪಿಸುವದಾಗಿದೆ. ಒತ್ತಡದ ಸಮಯದಲ್ಲೂ ಸಹ ಚಿಣ್ಣರ ಜೊತೆ ನಲಿದ ಸಂದರ್ಭ ಮರೆಯುವಂತಿಲ್ಲ.-ಶಿವಾನಂದ ಗುಡಗನಟ್ಟಿ, ಪಿಎಸ್‌ಐ, ಸವದತ್ತಿ.

Advertisement

Udayavani is now on Telegram. Click here to join our channel and stay updated with the latest news.

Next