Advertisement

ಪಿಎಸ್ಐ ಅಕ್ರಮ; ಬಂಧಿತ ಅಧಿಕಾರಿಗಳ ಮಂಪರು ಪರೀಕ್ಷೆ ಮಾಡಿ: ಸಿದ್ದರಾಮಯ್ಯ

02:21 PM Jul 14, 2022 | Team Udayavani |

ಕಲಬುರಗಿ: ಪಿಎಸ್ಐ ಅಕ್ರಮದಲ್ಲಿ ಬಂಧನಕ್ಕೊಳಗಾಗಿರುವ ಹಿರಿಯ ಅಧಿಕಾರಿ ಅಮೃತಪೌಲ್ ಮತ್ತು ಡಿವೈಎಸ್ಪಿ ಶಾಂತಕುಮಾರ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಇದರಿಂದ ನಿಜವಾದ ಕಿಂಗ್ ಪಿನ್ ಯಾರೂ, ಅವರ ಪಾತ್ರವೇನು? ಮಂತ್ರಿಮಂಡಲದವರು ಯಾರು ಶಾಮೀಲಾಗಿದ್ದಾರೆ ಎಲ್ಲವೂ ಬಯಲಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಅಧಿಕಾರಿಗಳನ್ನು ಬಂಧಿಸಿದ ಮಾತ್ರಕ್ಕೆ ಸರಕಾರದ ಕೆಲಸ ಮುಗಿಯುವುದಿಲ್ಲ.ಹಗರಣದ ಪ್ರಮುಖ ಪಾತ್ರಧಾರಿ ಸಿದ್ದರಾಮಯ್ಯ ಎಂದು ಅಶ್ವತ್ಥ ನಾರಾಯಣ ದೂರಿದ್ದಾರೆ ಎಂದು ಕೇಳಿದಾಗ, ಸಿಟ್ಟಿಗೆದ್ದ ಅವರು, ” ಅಲ್ಲಾರಿ..ನಾನು ಸಿಎಂ ಇದ್ದಾಗ, ಇವರು ವಿರೋಧ ಪಕ್ಷದಲ್ಲಿ ಇದ್ರಲ್ವಾ? ಅವರಿಗೆ ಆವಾಗ ಮಾತನಾಡಲು ಯಾರ್ರೀ ..ಬೇಡ ಅಂದಿದ್ರು..ಆವಾಗ ಆಯಪ್ಪ(ಅಶ್ವತ್ಥ ನಾರಾಯಣ) ಬಾಯಲ್ಲಿ ಕಡುಬು ಇಟ್ಟುಕೊಂಡಿದ್ರಾ… ಕಡುಬು ತಿನ್ನುತ್ತಿದ್ದರೇನ್ರಿ..” ಎಂದು ಪ್ರಶ್ನಿಸಿದರು.

ತಾವು ಮಾಡಿದ ಭ್ರಷ್ಟಾಚಾರನಾ ಮುಚ್ಚಿ ಹಾಕಿಕೊಳ್ಳಲಿಕ್ಕೆ ಇನ್ನೊಬ್ಬರ ಮೇಲೆ ಆರೋಪ ಮಾಡಿ ಸುಮ್ಮನಾದ್ರೆ ನಡೆಯೋದಿಲ್ಲ. ನಾಡಿನ ಜನ ನೋಡುತ್ತಿದ್ದಾರೆ. ಬಂಧಿತರ ಮಂಪರು ಪರೀಕ್ಷೆಯಾಗಬೇಕು. ಹಗರಣದಲ್ಲಿ ಯಾರು, ಯಾರೂ ಇದ್ದಾರೆ ಎಲ್ಲರ ಬಂಧನವಾಗಬೇಕು. ಈ ಬಂಧನವಾದವರೆಲ್ಲಾ ತುಂಬಾ ಚಿಕ್ಕವರು. ಇವರೆಲ್ಲದ ಹಿಂದಿನ ಮುಖಗಳು ಬಯಲಾಗಬೇಕು. ಆಗ ಇದು ಅಂತ್ಯಕ್ಕೆ ತಲುಪುತ್ತದೆ ಎಂದರು.

ಹುಟ್ಟಬ್ಬ ಯಾರಿಗೂ ನಡುಕ ಇಲ್ಲ
ನನ್ನ ಹುಟ್ಟಿದ ಹಬ್ಬಕ್ಕೆ ನಮ್ಮ ಪಕ್ಷದಲ್ಲಿ ಯಾಕ್ರಿ.. ನಡುಕ ಹುಟ್ಟುತ್ತೆ. ಅಂತಹದ್ದೇನೂ ಇಲ್ಲ. ನಮ್ಮವರಲ್ಲಿ ಯಾಕೆ ನಡುಕ ಬರ್ತದೆ. ಅದೇನಾದರೂ ಬರಬೇಕಿದ್ದರೆ ಬಿಜೆಪಿ ಮತ್ತು ವಿರೋಧ ಪಕ್ಷದಲ್ಲಿ. ಇದು ಸಿದ್ದರಾಮೋತ್ಸವ ಅಲ್ಲ. ಹಂಗಂತ ಹೆಸರು ಕೊಟ್ಟಿದ್ದು ಮಾಧ್ಯಮದವರು. ನಮ್ಮ ಪಕ್ಷದಲ್ಲಿ ಅಂತಹ ಹೆಸರು ಕೊಟ್ಟಿಲ್ಲ. 75 ವರ್ಷ ಆಗಿರೋದಿಕ್ಕೆ ನನ್ನ ಬೆಂಬಲಿಗರು ಉತ್ಸವ ಮಾಡುತ್ತಿದ್ದಾರೆ. ಅದಿಕ್ಕೆ ಬಿಜೆಪಿಯವರೆಗೆ ಭಯ ಶುರುವಾಗಿದೆ. ನಮ್ಮಲ್ಲೇನು ನಡುಕ ಇಲ್ಲ ಎಂದರು.

ಹಿಂದೆ ಯಡಿಯೂರಪ್ಪ ಮಾಡಿಕೊಂಡಿರಲಿಲ್ಲವಾ? ನಾನು ಹೋಗಿ ವಿಷ್ ಮಾಡಿ ಬರಲಿಲ್ಲವೇ? ಇದರಲ್ಲಿ ತುಂಬಾ ಸೂಕ್ಷ್ಮವಾಗಿ ಹುಡುಕುವಂತಹದ್ದೇನೂ ಇಲ್ಲ ಎಂದರು.

Advertisement

ಮಳೆ ಸರಕಾರ ಈಗಲಾದರೂ ಎಚ್ಚತ್ತುಕೊಳ್ಳಲಿ
ರಾಜ್ಯದಲ್ಲಿ ಮಳೆಯಿಂದ ಉಂಟಾಗುವ ಹಾನಿ ಮತ್ತು ಜನ ಸಂಕಷ್ಟದ ಕುರಿತು ಸರಕಾರ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು. ರೈತರು, ಜನರು ಸಂಕಷ್ಟಕ್ಕೆ ಸಿಲುಕಿದ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ. ಈಗಲೂ ಏನು ಮಿಂಚಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯಲ್ಲಿ ಇದ್ದು ಜನರ ನೋವುಗಳಿಗೆ ಸ್ಪಂದಿಸಲು ಸೂಚಿಸಬೇಕು. 2019ರ ಪರಿಹಾರ ಇನ್ನೂ ಜನರಿಗೆ ಸಿಕ್ಕಿಲ್ಲ. ಈಗ ಪುನಃ ನೆರೆಗೆ ಜನರ ಬದುಕು ಸಿಲುಕುತ್ತಿದೆ. ಕೂಡಲೇ ಸರಕಾರ ಜನರ ನೆರವಿಗೆ ಬರಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next