Advertisement

PSI ನೇಮಕ ಹಗರಣ: ಸರಕಾರಕ್ಕೆ ವರದಿ ಸಲ್ಲಿಕೆ

09:30 PM Jan 22, 2024 | Team Udayavani |

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಉಂಟು ಮಾಡಿದ್ದ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಬೆಳಕಿಗೆ ಬಂದಿದ್ದ ಪಿಎಸ್‌ಐ ನೇಮಕ ಹಗರಣದ ತನಿಖೆಗೆ ರಚಿಸಲಾಗಿದ್ದ ನ್ಯಾ| ಬಿ. ವೀರಪ್ಪ ಏಕಸದಸ್ಯ ವಿಚಾರಣ ಆಯೋಗವು ಸರಕಾರಕ್ಕೆ ವರದಿ ಸಲ್ಲಿಸಿದೆ.

Advertisement

ನೇಮಕಾತಿ ಪರೀಕ್ಷಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರುವುದು ಸಹಿತ ಕೆಲವು ಪ್ರಮುಖ ಶಿಫಾರಸುಗಳನ್ನು ವರದಿಯಲ್ಲಿ ಮಾಡಲಾಗಿದೆ. ನ್ಯಾ| ಬಿ.ವೀರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸೋಮವಾರ ವರದಿ ಸಲ್ಲಿಸಿದರು.

ಒಟ್ಟು 471 ಪುಟಗಳ ಸುದೀರ್ಘ‌ ವರದಿ ಇದಾಗಿದ್ದು, 28 ಮಂದಿ ಪ್ರಮುಖ ಸಾಕ್ಷಿಗಳು, 5 ಮಂದಿ ಹೆಚ್ಚುವರಿ ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಹಗರಣಕ್ಕೆ ಸಂಬಂಧಿಸಿ ಒಟ್ಟು 324 ದಾಖಲೆಗಳನ್ನು ವರದಿಯಲ್ಲಿ ಗುರುತು (ಮಾರ್ಕ್‌) ಮಾಡಲಾಗಿದೆ. 3 ತಿಂಗಳಲ್ಲಿ 23 ಕೆಲಸದ ದಿನಗಳಲ್ಲಿ ಆಯೋಗದ ವಿಚಾರಣೆ ನಡೆದಿದೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಡಿಸಿಎಂ ಡಾ| ಅಶ್ವತ್ಥನಾರಾಯಣ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಹಿತ ಪ್ರಮುಖ ರಾಜಕೀಯ ನಾಯಕರನ್ನು ಆಯೋಗ ವಿಚಾರಣೆಗೆ ಕರೆದಿತ್ತು. ವಕೀಲರ ಮೂಲಕ ಈ ನಾಯಕರು ತಮ್ಮ ವಾದ ಮಂಡಿಸಿದ್ದರು. ಪೊಲೀಸ್‌ ಅಧಿಕಾರಿಗಳು ಸೇರಿ 100ಕ್ಕೂ ಅಧಿಕ ಮಂದಿಗೆ ಆಯೋಗ ನೋಟಿಸ್‌ ಜಾರಿಗೊಳಿಸಿತ್ತು. ರಾಜ್ಯದಲ್ಲಿ ಹೊಸದಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ 2023ರ ಜುಲೈ ತಿಂಗಳಲ್ಲಿ ನ್ಯಾ| ಬಿ.ವೀರಪ್ಪ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗಿತ್ತು.

ವರದಿ ಮುಂದೇನು?
ಆಯೋಗ ಸಲ್ಲಿಸಿದ ವರದಿಯನ್ನು ಸಚಿವ ಸಂಪುಟದ ಮುಂದೆ ತಂದು ಅನುಮೋದನೆ ಪಡೆದು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಿ, ಸರಕಾರ ಮುಂದಿನ ಕ್ರಮ ಕೈಗೊಳ್ಳಬೇಕು. ಬಿಜೆಪಿ ಸರಕಾರದ ಅವಧಿಯಲ್ಲಿ ಹಗರಣ ಬೆಳಕಿಗೆ ಬಂದಾಗ ವಿಪಕ್ಷದಲ್ಲಿದ್ದು, ಅದರ ವಿರುದ್ಧ ಸಮರ ಸಾರಿದ್ದ ಕಾಂಗ್ರೆಸ್‌ ಈಗ ಅಧಿಕಾರಿದಲ್ಲಿದೆ. ತಾನೇ ರಚಿಸಿದ ವಿಚಾರಣ ಆಯೋಗದ ವರದಿ ಬಗ್ಗೆ ಮುಂದೆ ಕಾಂಗ್ರೆಸ್‌ ಏನು ಮಾಡುತ್ತದೆ ಎಂದು ಕಾದು ನೋಡಬೇಕಿದೆ.

Advertisement

ಸರಕಾರ ರೂಪಿಸಿದ್ದ ಮಾರ್ಗಸೂಚಿಗಳನ್ವಯ ವಿಚಾರಣೆ ನಡೆಸಿ ವರದಿ ಸಲ್ಲಿಸಲಾಗಿದೆ. ಮುಂದಿನ ಕ್ರಮ ಸರಕಾರಕ್ಕೆ ಬಿಟ್ಟದ್ದು. ವರದಿ ಸಲ್ಲಿಸಿದ್ದರ ಬಗ್ಗೆ ಸಮಾಧಾನವಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ಸಹಿತ ಕೆಲವು ಶಿಫಾರಸುಗಳನ್ನು ಮಾಡಲಾಗಿದೆ.
– ನ್ಯಾ| ಬಿ. ವೀರಪ್ಪ.

ಹಗರಣ ನಡೆದು ಬಂದ ಹಾದಿ
ಸಿವಿಲ್‌ ಪಿಎಸ್‌ಐ ಹುದ್ದೆಗಳ ಭರ್ತಿಗೆ 2021ರ ಜ.21ರಂದು ರಾಜ್ಯ ಪೊಲೀಸ್‌ ಇಲಾಖೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು. ದೈಹಿಕ ಪರೀಕ್ಷೆ ಅರ್ಹತೆ ಪಡೆದವರಿಗೆ ರಾಜ್ಯದಾದ್ಯಂತ 92 ಕೇಂದ್ರಗಳಲ್ಲಿ 2021ರ ಅ.3ರಂದು ಲಿಖೀತ ಪರೀಕ್ಷೆ ನಡೆಸಲಾಗಿತ್ತು. 2022ರ ಜ.19ರಂದು ಸಂಭಾವ್ಯ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಆಯ್ಕೆ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆಗೆ ಹಾಗೂ ವೈದ್ಯಕೀಯ ಪರೀಕ್ಷೆಗೆ ಕರೆಯಲಾಗಿತ್ತು. ಈ ಮಧ್ಯೆ ಲಿಖೀತ ಪರಿಕ್ಷೆಯಲ್ಲಿ ಉತ್ತರ ಪತ್ರಿಕೆ ತಿದ್ದುಪಡಿ ಮಾಡಿರುವುದು ಸೇರಿ ಹಲವು ಅಕ್ರಮಗಳು ನಡೆದಿರುವುದು ಬಯಲಾಗಿತ್ತು. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಪ್ರಕರಣ ಸಂಬಂಧ ಪೊಲೀಸ್‌ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಅಮೃತ್‌ ಪೌಲ್‌, ಪ್ರಮುಖ ರೂವಾರಿಗಳಾದ ದಿವ್ಯಾ ಹಾಗರಗಿ, ಆರ್‌.ಡಿ ಪಾಟೀಲ್‌ ಸೇರಿ 113ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿತ್ತು.

ಸರ್ಕಾರದ ಆದೇಶ ಎತ್ತಿಹಿಡಿದಿದ್ದ ಹೈಕೋರ್ಟ್‌: ಇದರಿಂದ ಪಿಎಸ್‌ಐ ನೇಮಕಾತಿಗೆ ನಡೆಸಲಾಗಿದ್ದ ಲಿಖೀತ ಪರೀಕ್ಷೆ ರದ್ದುಪಡಿಸಿ, ಮರು ಪರೀಕ್ಷೆ ನಡೆಸುವುದಾಗಿ 2022ರ ಏ.29ರಂದು ಅಂದಿನ ಬಿಜೆಪಿ ಸರ್ಕಾರ ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಆಯ್ಕೆಯಾಗಿದ್ದ ಕೆಲ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ಅರ್ಜಿ ಸಲ್ಲಿಸಿದ್ದರು. ಅದನ್ನು 2022ರ ಜು.19ರಂದು ಕೆಎಟಿ ವಜಾಗೊಳಿಸಿತ್ತು. ಇದರಿಂದ ಅಭ್ಯರ್ಥಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಹೊಸದಾಗಿ ಲಿಖೀತ ಪರಿಕ್ಷೆ ನಡೆಸುವ ಸರ್ಕಾರದ ಆದೇಶಕ್ಕೆ 2022ರ ಸೆ.27ರಂದು ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಆ ತಡೆಯಾಜ್ಞೆ ವಿಸ್ತರಣೆಯಾಗುತ್ತಾ ಬಂದಿತ್ತು. ಅಂತಿಮವಾಗಿ ಮರುಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದು 2023ರ ನ.10ರಂದು ಹೈಕೋರ್ಟ್‌ ಆದೇಶ ಪ್ರಕಟಿಸಿತ್ತು. ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವಾಗಲೇ ಸರ್ಕಾರ ನ್ಯಾ. ವೀರಪ್ಪ ಆಯೋಗ ರಚಿಸಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next