ಬೆಂಗಳೂರು: ಪಿಎಸ್‌ಐ ಅಕ್ರಮದಲ್ಲಿ ಶಾಮೀಲಾಗಿ ಬಂಧನಕ್ಕೊಳಗಾಗಿರುವ ಮಾಜಿ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಜೈಲಿನಲ್ಲಿ ಹತಾಶೆಗೊಳಗಾಗಿ ಸಿಕ್ಕಸಿಕ್ಕವರಿಗೆ ಬಯ್ಯುತ್ತಿದ್ದು, ಸಹಕೈದಿಗಳು ಹೈರಾಣಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಜು.15ರಂದು ಸಿಐಡಿ ವಶಕ್ಕೆ ಪಡೆದಿದ್ದ ಅವಧಿ ಮುಗಿದು ಜೈಲು ಸೇರಿರುವ ಅಮೃತ್ ಪೌಲ್, 24 ದಿನಗಳಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.
ತನ್ನ ಈ ಸ್ಥಿತಿಗೆ ಕಾರಣನಾಗಿದ್ದೇ ಡಿವೈಎಸ್‌ಪಿ ಶಾಂತಕುಮಾರ್ ಎಂದು ಅಮೃತ್ ಪೌಲ್ ಕೆಂಡಾ ಮಂಡಲರಾಗಿದ್ದಾರೆ. ಅಮೃತ್ ಪೌಲ್ ಕಿರಿಕಿರಿಗೆ ಬೇಸತ್ತ¤ ಜೈಲು ಅಧಿಕಾರಿಗಳು ಬೇರೆ ಸೆಲ್‌ಗೆ ಸ್ಥಳಾಂತರಿಸಿದ್ದಾರೆ. ಸದ್ಯ ಪ್ರತಿನಿತ್ಯ ಮೂರು ಬಾರಿ ಮನೆಯಿಂದಲೇ ತಿಂಡಿ, ಊಟ ನೀಡಲಾಗುತ್ತಿದೆ.
ಎಡಿಜಿಪಿಯಾಗಿ ಬೆಂಗಳೂರು ಕಮಿಷನರ್ ರೇಸ್‌ನಲ್ಲಿದ್ದ ಪೌಲ್, ಜೈಲು ಸೇರಿ, ಜಾಮೀನು ಅರ್ಜಿ ಪದೇಪದೆ ವಜಾ ಆಗುತ್ತಿರುವುದೇ ಅವರ ಹತಾಶೆಗೆ ಕಾರಣ ಎನ್ನಲಾಗಿದೆ. ತನಗೆ ಯಾವಾಗ ಜಾಮೀನು ಸಿಗುತ್ತದೋ ಎಂಬ ಆತಂಕದಲ್ಲಿರುವ ಪೌಲ್, ತನ್ನ ಸ್ಥಿತಿಗೆ ಮರುಗುವ ಬದಲು ಜೈಲಲ್ಲಿ ಸಹಕೈದಿಗಳ ಮೇಲೆ ರೇಗಾಡುತ್ತಿದ್ದಾರೆ. ಇದಕ್ಕೆ ಸಹಕೈದಿಗಳಿಂದ ಆಕ್ರೋಶವೂ ವ್ಯಕ್ತವಾಗಿದೆ. ಇದು ಜೈಲಿನ ಸಿಬಂದಿಗೂ ತಲೆನೋವು ಉಂಟು ಮಾಡಿದೆ.