ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿರುವ 545 ಸಬ್‌ಇನ್ಸ್‌ಪೆಕ್ಟರ್(ಪಿಎಸ್‌ಐ) ಹುದ್ದೆ ನೇಮಕಾತಿಯಲ್ಲಿ ಅಕ್ರಮ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪಿಎಸ್‌ಐ ಹುದ್ದೆಗಳಿಗೆ ಪರೀಕ್ಷೆ ನಡೆದು ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯೂ ಪ್ರಕಟವಾಗಿದೆ. ಈ ನಡುವೆ ಪರೀಕ್ಷೆಯಲ್ಲಿ ಸಾಕಷ್ಟು ಅಕ್ರಮ ನಡೆದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ.
ಕಲಬರುಗಿಯ ಜ್ಞಾನಜ್ಯೋತಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿರುವ ಅನುಮಾನವಿದೆ. ಹೀಗಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಈಗಾಗಲೇ ಸಿಐಡಿ ತಂಡವನ್ನು ಕಲಬುರಗಿಗೆ ಕಳುಹಿಸಲಾಗಿದೆ ಎಂದರು.
ಪಿಎಸ್‌ಐ ಪರೀಕ್ಷೆ ಬರೆದಿದ್ದ ವಿರೇಶ್ ಎಂಬ ಅಭ್ಯರ್ಥಿ 21 ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ. ಆದರೆ, ಓಎಂಆರ್ ಶೀಟ್‌ನಲ್ಲಿ ಆತನಿಗೆ ನೂರು ಅಂಕ ಬಂದಿದೆ. ಹೀಗಾಗಿ ಅಕ್ರಮದ ಅನುಮಾನ ಬಂದಿದ್ದು, ಪೂರಕ ಸಾಕ್ಷ್ಯವೂ ಸಿಕ್ಕಿದೆ. ಹೀಗಾಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಕಷ್ಟಪಟ್ಟು ಓದಿದ ಪ್ರತಿಭಾವಂತರಿಗೆ ಅನ್ಯಾಯವಾಗಬಾರದು. ಹೀಗಾಗಿ, ಪರೀಕ್ಷಾ ಅಕ್ರಮದ ಆರೋಪದ ಸತ್ಯಾಸತ್ಯತೆ ಬೆಳಕಿಗೆ ತರಲು ಸಮಗ್ರ ತನಿಖೆಗಾಗಿ ಸಿಐಡಿಗೆ ವಹಿಸಲಾಗಿದೆ ಎಂದು ಹೇಳಿದರು.
ಆದ್ಯತೆ ಮೇರೆಗೆ ಸಿಐಡಿ ತನಿಖೆ ನಡೆಯಲಿದೆ.ಈ ಅಕ್ರಮದ ಹಿಂದೆ ಯಾರಿದ್ದಾರೆ? ಪೊಲೀಸರ ಕೈವಾಡವೂ ಇದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯಲಿದೆ. 545 ಹುದ್ದೆಗಳಿಗೆ ಸುಮಾರು 52 ಸಾವಿರದಷ್ಟು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪ್ರತಿಭಾವಂತರಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಅಕ್ರಮದ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ವಹಿಸಲಾಗಿದೆ ಎಂದು ಪುನರುಚ್ಚಿಸಿದರು.