Advertisement

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

02:16 AM Jul 06, 2022 | Team Udayavani |

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧ ಸೋಮವಾರ ಬಂಧನಕ್ಕೆ ಒಳಗಾಗಿರುವ ಎಡಿಜಿಪಿ ಅಮೃತ್‌ ಪೌಲ್‌ ಅವರನ್ನು ವಿಚಾರಣೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಅವರ ಮೊಬೈಲ್‌ ಫೋನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

Advertisement

ಮೊಬೈಲ್‌ನಲ್ಲಿ ಇರುವ ಸಾಕ್ಷ್ಯಗಳನ್ನು ಅಮೃತ್‌ ಪೌಲ್‌ ನಾಶಪಡಿಸಿದ್ದಾರೆ. ಹೀಗಾಗಿ ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರಲ್ಲಿ ಇರುವ ದಾಖಲೆಗಳನ್ನು ರಿಟ್ರೀವ್‌ ಮಾಡಿದ ಬಳಿಕ ಅವರು ಯಾರೊಂದಿಗೆಲ್ಲ ವ್ಯವಹಾರ ನಡೆಸುತ್ತಿದ್ದರು ಎಂಬಿತ್ಯಾದಿ ಸಾಕ್ಷ್ಯಗಳು ಲಭ್ಯವಾಗಲಿವೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಈ ಹಿಂದೆ ವಶಕ್ಕೆ ಪಡೆಯಲಾಗಿದ್ದ ಡಿವೈಎಸ್ಪಿ ಶಾಂತಕುಮಾರ್‌ ಮೊಬೈಲನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ರಿಟ್ರೀವ್‌ ಮಾಡಲಾಗಿದೆ. ಈ ವೇಳೆ ಕೆಲವು ಆಡಿಯೋಗಳು ಲಭ್ಯವಾಗಿವೆ. ಅಮೃತ್‌ ಪೌಲ್‌ ಮತ್ತು ಶಾಂತಕುಮಾರ್‌ ನಡುವಣ ಸಂಭಾಷಣೆಯೂ ಇದರಲ್ಲಿ ಸೇರಿದೆ. ಅದರಲ್ಲಿ ಅಮೃತ್‌ ಪೌಲ್‌, “ಒಎಂಆರ್‌ ಶೀಟ್‌ಗಳನ್ನು ಸಂಗ್ರಹಿಸಿಟ್ಟಿದ್ದ ಕೊಠಡಿ ಮತ್ತು ಕಿಟ್‌ ಬಾಕ್ಸ್‌ನ ಪಾಸ್‌ವರ್ಡ್‌ ಮತ್ತು ಕೀ ತೆಗೆದುಕೊಂಡು ಏನು ಬೇಕಾದರೂ ಮಾಡಿಕೋ. ಆದರೆ ಮಾತುಕತೆಯಂತೆ ಹಣ ನೀಡಬೇಕು ಅಷ್ಟೇ’ ಎಂದು ಬೇಡಿಕೆ ಮಂಡಿಸಿರುವುದು ಬಹಿರಂಗವಾಗಿದೆ. ಇದಾದ ಬೆನ್ನಲ್ಲೇ ಶಾಂತಕುಮಾರ್‌ 5 ಕೋಟಿ ರೂ.ಗಳನ್ನು ಅಮೃತ್‌ ಪೌಲ್‌ ಸೂಚಿಸಿದ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಅವು ಯಾರ ಖಾತೆಗಳು ಎಂಬುದು ಪತ್ತೆಯಾಗಬೇಕಿದೆ. ಹೀಗಾಗಿ ಸಂಬಂಧಿಸಿದ ಬ್ಯಾಂಕ್‌ಗೆ ಪತ್ರ ಬರೆಯಲಾಗಿದೆ. ಅಲ್ಲಿಂದ ಮಾಹಿತಿ ಬಂದ ಬಳಿಕ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಎಡಿಜಿಪಿ ನೇತೃತ್ವದಲ್ಲಿ ತನಿಖೆ
ಅಮೃತ್‌ ಪೌಲ್‌ ಅವರನ್ನು ಸಿಐಡಿ ಎಡಿಜಿಪಿ ಉಮೇಶ್‌ ಕುಮಾರ್‌ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶೇಖರ್‌ ವಿಚಾರಣೆ ನಡೆಸಲು ಮುಂದಾಗಿದ್ದರು. ಆದರೆ ಅಮೃತ್‌ ಪೌಲ್‌ ತಾನೊಬ್ಬ ಎಡಿಜಿಪಿ ಶ್ರೇಣಿ ಅಧಿಕಾರಿಯಾಗಿರುವುದರಿಂದ ನಿನ್ನಿಂದ ವಿಚಾರಣೆಗೆ ಒಳಪಡುವುದಿಲ್ಲ ಎಂದು ವರಸೆ ತೆಗೆದಿದ್ದರು. ಬಳಿಕ ಎಡಿಜಿಪಿ ಉಮೇಶ್‌ ಕುಮಾರ್‌ ಅವರೇ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಶಾಂತಕುಮಾರ್‌ ಮೇಲೆ ಆರೋಪ
ವಿಚಾರಣೆ ಸಂದರ್ಭ ಪೌಲ್‌, ಸ್ಟ್ರಾಂಗ್‌ ರೂಮ್‌ ಕೀಲಿಕೈ ಶಾಂತ ಕುಮಾರ್‌ಗೆಕೊಟ್ಟದ್ದು ನಿಜ. ಆತ ಒಎಂಆರ್‌ ಶೀಟ್‌ ಪರಿಶೀಲನೆಯ ನೆಪದಲ್ಲಿ ಕೀಲಿಕೈ ಪಡೆದಿದ್ದ. ಆದರೆ ಆತ ಅಕ್ರಮ ನಡೆಸುತ್ತಾನೆ ಎನ್ನುವುದು ಗೊತ್ತಿರಲಿಲ್ಲ  ಎಂದು ಶಾಂತಕುಮಾರ್‌ ವಿರುದ್ಧವೇ ಆರೋಪ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಮಂಜುನಾಥ್‌ ಮನೆ ಶೋಧ
ಮಂಗಳವಾರ ಸೆರೆಯಾಗಿರುವ ಐಎಎಸ್‌ ಅಧಿಕಾರಿ ಜೆ. ಮಂಜುನಾಥ್‌ಗೆ ಸೇರಿದ ಫ್ಲ್ಯಾಟ್‌ನಲ್ಲಿ ಎಸಿಬಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.  ಯಶವಂತಪುರದ ಸಲಾರ್‌ ಪುರಿಯಾ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಸುಮಾರು ಐದೂವರೆ ತಾಸುಗಳ ಕಾಲ ಶೋಧಿಸಲಾಗಿದೆ. ಈ ವೇಳೆ ಕೆಲವು ದಾಖಲೆಗಳು ಪತ್ತೆಯಾಗಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ. ಡಿವೈಎಸ್ಪಿ ನೇತೃತ್ವದಲ್ಲಿ 8 ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೆಯಲ್ಲಿ ಲಂಚಕ್ಕೆ ಸಂಬಂಧಿಸಿ ದಾಖಲೆ ಅಥವಾ ಸಾಕ್ಷ್ಯ ಇದೆಯೇ ಎಂದು ಶೋಧಿಸಲಾಗಿದೆ ಎಂಬುದಾಗಿ ಎಸಿಬಿ ಮೂಲಗಳು ತಿಳಿಸಿವೆ.

 

 

 

 

Advertisement

Udayavani is now on Telegram. Click here to join our channel and stay updated with the latest news.

Next