ರಾಯಚೂರು: ವೀಕೆಂಡ್ ಕರ್ಫ್ಯೂ ವೇಳೆ ತರಕಾರಿ ಮಾರುತ್ತಿರುವ ಕಾರಣಕ್ಕೆ ಪಿಎಸ್ ಐ ಬೂಟು ಕಾಲಲ್ಲಿ ತರಕಾರಿ ಒದೆಯುವ ಮೂಲಕ ದರ್ಪ ಪ್ರದರ್ಶಿಸಿದ್ದಾರೆ.
ನಗರದ ಸದರ ಬಜಾರ್ ಠಾಣೆ ಪಿಎಸ್ಐ ಆಜಂ ಈ ವರ್ತನೆಯಿಂದ ಸಾರ್ಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಿಲ್ಲಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ತುರ್ತು ಸೇವೆ ಹೊರತಾಗಿಸಿ ಯಾವುದೇ ವಹಿವಾಟು ನಡೆಸದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಬ್ರಿಟನ್ ನಲ್ಲಿ ಕೋವಿಡ್ 3ನೇ ಅಲೆ ಪ್ರಾರಂಭ; ಸತತ ಮೂರನೇ ದಿನ 10 ಸಾವಿರ ಪ್ರಕರಣ ಪತ್ತೆ
ಆದರೂ ನಗರದ ತರಕಾರಿ ಮಾರುಕಟ್ಟೆ, ಭಂಗಿಕುಂಟಾ, ಚಂದ್ರಮೌಳೇಶ್ವರ ವೃತ್ರದಿಂದ ಪಟೇಲ್ ರಸ್ತೆ ಮಾರ್ಗದಲ್ಲಿ ರೈತರು, ವರ್ತಕರು ತರಕಾರಿ ಮಾರಾಟ ಮಾಡುತ್ತಿದ್ದರು. ಇದನ್ನು ಕಂಡು ಆಕ್ರೋಶಗೊಂಡ ಪಿಎಸ್‌ಐ ತರಕಾರಿಯನ್ನೆಲ್ಲ ಒದ್ದು ಚಲ್ಲಾಪಿಲ್ಲಿ ಮಾಡಿದ್ದಾರೆ.
ಅಲ್ಲದೇ ತರಕಾರಿ ಮಾರಾಟಗಾರರ ಮೇಲೆ ಲಾಠಿ ಬೀಸಿದ್ದಾರೆ. ಈ ವೇಳೆ ಕೆಲ ಮಾರಾಟಗಾರರು ಅವರೊಂದಿಗೆ ವಾಗ್ವಾದ ನಡೆಸಿದ ಪ್ರಸಂಗ ಕೂಡ ನಡೆಯಿತು. ವ್ಯಾಪಾರ ವಹಿವಾಟಿಗೆ ಅವಕಾಶ ಇಲ್ಲದ ಕಾರಣ ತರಕಾರಿ ಮಾರಾಟ ಮಾಡಿದ್ದು ತಪ್ಪು. ಹಾಗಂತ ಬಡವರ ಮೇಲೆ ಪೊಲೀಸರು ಈ ರೀತಿ ದರ್ಪ ತೋರಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಸಾರ್ವನಿಕರದ್ದು.