Advertisement

ಪ್ರಚೋದನಾಕಾರಿ ಹೇಳಿಕೆ: ಶೋಭಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

10:21 PM Mar 22, 2024 | Team Udayavani |

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣಕ್ಕೆ ತಮಿಳುನಾಡಿಗೆ ಸಂಬಂಧ ಕಲ್ಪಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್‌ ತಡೆ ನೀಡಿದೆ.

Advertisement

ಪ್ರಕರಣ ಸಂಬಂಧ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್‌ ಹಾಗೂ ಅದರ ಸಂಬಂಧ 5ನೇ ಎಸಿಎಂಎಂ ನ್ಯಾಯಾಲಯದ ಮುಂದಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಶೋಭಾ ಕರಂದ್ಲಾಜೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರಕರಣಕ್ಕೆ ತಡೆ ನೀಡಿತು. ಅಲ್ಲದೆ, ಪ್ರತಿವಾದಿಗಳಾದ ಕಾಟನ್‌ಪೇಟೆ ಪೊಲೀಸರು ಹಾಗೂ ದೂರು ದಾಖಲಿಸಿದ್ದ ಚುನಾವಣಾ ನೀತಿ ಸಂಹಿತೆ ಸಂಚಾರಿ ದಳದ ಅಧಿಕಾರಿ ಎಂ.ಎನ್‌.ಶಿವರಾಜು ಅವರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಶೋಭಾ ಕರಂದ್ಲಾಜೆ ಪರ ವಕೀಲ ವೆಂಕಟೇಶ್‌ ದಳವಾಯಿ ವಾದ ಮಂಡಿಸಿ, ಇತ್ತೀಚಿಗೆ ನಗರ್ತಪೇಟೆಯಲ್ಲಿ ನಡೆದ ಘಟನೆ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅರ್ಜಿದಾರರು, ಒಬ್ಬ ವ್ಯಕ್ತಿ ತಮಿಳುನಾಡಿನಿಂದ ಬಂದು ಬಾಂಬ್‌ ಸ್ಫೋಟಿಸಿ ಹೋಗುತ್ತಾನೆ, ಮತ್ತೂಬ್ಬ ಕೇರಳದಿಂದ ಬಂದು ಆ್ಯಸಿಡ್‌ ದಾಳಿ ನಡೆಸುತ್ತಾನೆ, ಇನ್ನೊಬ್ಬ ದೆಹಲಿಯಿಂದ ಬಂದು ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗುತ್ತಾನೆ ಎಂದು ಹೇಳಿದ್ದರು. ಅದಕ್ಕೆ, ಇದು ದೇಶದ ಜನರ ನಡುವೆ ದ್ವೇಷ ಹುಟ್ಟು ಹಾಕುವಂತಹದ್ದು, ಸಮುದಾಯಗಳ ನಡುವೆ ಕೋಮು ಪ್ರಚೋದನೆ ನೀಡುವಂತಹದ್ದು ಎಂದು ದೂರಿನಲ್ಲಿ ಹೇಳಲಾಗಿದೆ.

ಆದರೆ, ಭಾಷಣದಲ್ಲಿ ಯಾವುದೇ ಧರ್ಮ, ಜಾತಿ, ಪಂಗಡವನ್ನು ಉಲ್ಲೇಖೀಸಲಾಗಿಲ್ಲ. ಎಫ್ಐಆರ್‌ ದಾಖಲಿಸುವ ಮೊದಲು ದೂರುದಾರರು ಪ್ರಾಥಮಿಕ ತನಿಖೆ ನಡೆಸಬೇಕಿತ್ತು. ಆದ್ದರಿಂದ ಇದೊಂದು ರಾಜಕೀಯ ಪ್ರೇರಿತ ಪ್ರಕರಣವಾಗಿದ್ದು, ಎಫ್ಐಆರ್‌ ದಾಖಲಿಸಿರುವುದು ಕಾನೂನಿನ ದುರ್ಬಳಕೆ ಆಗಿದೆ. ಹಾಗಾಗಿ, ಎಫ್ಐಆರ್‌ ರದ್ದುಪಡಿಸಬೇಕು ಎಂದು ಕೋರಿದರು.

Advertisement

ಮಾತಿನ ಮೇಲೆ ಹಿಡಿತ ಇರಲಿ:
ರಾಜಕೀಯ ನಾಯಕರಿಗೆ ಚಾಟಿ
ವಿಚಾರಣೆ ವೇಳೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಮಾತಿಗೆ ಅಳತೆಗೋಲು ಇರಲಿ ಎಂದು ಸಲಹೆ ನೀಡಿತು. ಅಲ್ಲದೆ, ಯಾವುದೇ ಪಕ್ಷ ಇರಲಿ ರಾಜಕೀಯ ನಾಯಕರು ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ವಾಕ್‌ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಇರಬಹುದು. ಆದರೆ, ನಾವು ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ. ಇಲ್ಲದಿದ್ದರೆ ಭಾರತವು ಅಫ್ಘಾನಿಸ್ತಾನ ಆಗಬಹುದು. ಅಲ್ಲಿಗೆ ಯಾರಿಗೂ ಸ್ವಾತಂತ್ರ್ಯವಿಲ್ಲ ಎಂದು ನ್ಯಾಯಪೀಠ ತೀಕ್ಷ್ಣವಾಗಿ ಹೇಳಿತು. ಮಾತಿನ ಮೇಲೆ ಸಂಯಮ ಇರಲಿ ಎಂದು ಜಡ್ಜ್ ಮನವಿ ಮಾಡಿಕೊಂಡಿದ್ದಾರೆ ಎಂದು ನಿಮ್ಮ ಕಕ್ಷಿದಾರರಿಗೆ ಹೇಳಿ ಎಂದು ನ್ಯಾಯಪೀಠ ಶೋಭಾ ಕರಂದ್ಲಾಜೆ ಪರ ವಕೀಲರಿಗೆ ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next