Advertisement

ಸಕಾಲಕ್ಕೆ ಬಾರದ ಶೌಚಾಲಯದ  ಅನುದಾನ

10:37 AM Sep 15, 2017 | Team Udayavani |

ದಾವಣಗೆರೆ: ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿಸಲು ಪಣತೊಟ್ಟಿರುವ ಜಿಲ್ಲಾ ಪಂಚಾಯತ್‌ಗೆ ಸಕಾಲಕ್ಕೆ ಅನುದಾನವೇ ಬರುತ್ತಿಲ್ಲ ಎಂಬ ಸಂಗತಿ ಗುರುವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಬಯಲಾಗಿದೆ.

Advertisement

ಸಭೆ ಆರಂಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್‌, ಸ್ವಚ್ಛಭಾರತ್‌ ಮಿಷನ್‌ನಡಿ ಜಿಲ್ಲೆಯಲ್ಲಿ ಶೌಚಾಲಯ ಇಲ್ಲದೇ ಇರುವವರಿಗೆ ಆ ಸೌಲಭ್ಯ ಕಲ್ಪಿಸಿ, ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವರ್ಹಣಾಧಿಕಾರಿ ಎಸ್‌. ಅಶ್ವತಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಮಾಧ್ಯಮದ ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಅವರ ಕೆಲಸ ಇತರೆ ಅಧಿಕಾರಿಗಳಿಗೆ ಪ್ರೇರಣೆಯಾಗುವಂತಿದೆ. ಇದಕ್ಕಾಗಿ ನಾನು ಕೇಂದ್ರ ಸರ್ಕಾರ, ಬಿಜೆಪಿ ವತಿಯಿಂದ ವೈಯುಕ್ತಿವಾಗಿ ಅಭಿನಂದಿಸುವೆ ಎಂದರು. ಆಗ ಸಭೆಯಲ್ಲಿದ್ದ ದಿಶಾ ಸದಸ್ಯರು, ಅಧಿಕಾರಿಗಳು ಚಪ್ಪಾಳೆ ಮೂಲಕ ಸಿಇಒ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆದರೆ, ಸಭೆಯ ಮಧ್ಯ ಭಾಗದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಪಾಲು ಹೊಂದಿರುವ ಬಹುತೇಕ ಯೋಜನೆಗಳಿಗೆ ಸರಿಯಾಗಿ ಹಣ ಬರುತ್ತಿಲ್ಲ. ಶೌಚಾಲಯ ನಿರ್ಮಾಣಕ್ಕೆ ಕೊಡಲಾಗುವ ಹಣ ಸಹ ಬರುತ್ತಿಲ್ಲ ಎಂಬುದನ್ನು ಸಿಇಒ ಅಶ್ವತಿ, ದಾವಣಗೆರೆ ತಾಲ್ಲೂಕು ಪಂಚಾಯತ್‌ ಇಒ ಪ್ರಭುದೇವ್‌ ಸಂಸದರ ಗಮನಕ್ಕೆ ತಂದರು. ಜೊತೆಗೆ ಸಕಾಲಕ್ಕೆ ಅನುದಾನ ಕೊಡಿಸಿದರೆ ಕೆಲಸ ಇನ್ನಷ್ಟು ವೇಗವಾಗಿ ಆಗುತ್ತದೆ ಎಂದರು.

ಇದಕ್ಕೆ ಸಂಸದರು, ಕೇಂದ್ರ ಸರ್ಕಾರದಿಂದ ವಿಳಂಬ ಆಗುತ್ತದೆಯೋ? ರಾಜ್ಯ ಸರ್ಕಾರದಿಂದಲೋ ಎಂಬುದನ್ನ ತಿಳಿದುಕೊಳ್ಳಿ. ಸಂಬಂಧ ಪಟ್ಟ ಸಚಿವರು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಸರಿಯಾದ ಸಮಯಕ್ಕೆ ಅನುದಾನ ಬರುವಂತೆ ಮಾಡಬಹುದು ಎಂದಾಗ, ಅಧಿಕಾರಿಗಳು ನಮಗೆ ಈ ಕುರಿತು ಮಾಹಿತಿ ಇರುವುದಿಲ್ಲ ಎಂದರು.

ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ದಿಶಾ ಸಮಿತಿಯ ಸದಸ್ಯರಾದ ಲಕ್ಷ್ಮಣ, ಮಂಜನಾಯ್ಕ, ಪರಮಶಿವ, ತಾಲ್ಲೂಕು ಪಂಚಾಯತ್‌, ಗ್ರಾಮ ಪಂಚಾಯತ್‌ ಅಧ್ಯಕ್ಷರು, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

ಸಭೆಯಲ್ಲಿ ಕೇಳಿದ್ದು….
* ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಗೆ ಈ ಬಾರಿ ಯಾವುದೇ ಅನುದಾನ ಬಂದಿಲ್ಲ.
* ಚರಂಡಿ ಆಳ, ಅಗಲ ಆಧಾರದಲ್ಲಿಯೇ ಹೂಳು ತುಂಬಿದೆ ಎಂದು ಹೇಳಿ ಅಧಿಕಾರಿಗಳು ಹಣ ಡ್ರಾ ಮಾಡ್ತಾರೆ, ವಾಸ್ತವದಲ್ಲಿ ಚರಂಡಿಯಲ್ಲಿ ಒಂದಡಿ ಹೂಳು ಸಹ ಇರೋಲ್ಲ ಎಂಬುದನ್ನು ದಿಶಾ ಸದಸ್ಯ ಮಂಜಾನಾಯ್ಕ ಆರೋಪಿಸಿದರು.
* ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಬರುವರರಿಗೆ ಅಂದಂದೇ ಕೂಲಿ ಪಾವತಿಸಲು ಸರಿಯಾಗಿ ಅನುದಾನ ಬರುತ್ತಿಲ್ಲ ಎಂಬುದನ್ನು ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳು ಸಂಸದರ ಗಮನ ಸೆಳೆದರು.
* ಜಿಲ್ಲೆಯಲ್ಲಿ ಅನುದಾನ ದುರ್ಬಳಕೆ ಮಾಡಿದ ಅಧಿಕಾರಿ, ಜನಪ್ರತಿನಿಧಿಗಳ ಮೇಲೆ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗಿದೆ. ಅನೇಕ ಗ್ರಾಪಂ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರ ಮೇಲೆ ಕ್ರಿಮಿನಲ್‌ ಕೇಸ್‌ ಹಾಕಲಾಗಿದೆ ಎಂಬುದನ್ನು ಉಪ ಕಾರ್ಯದರ್ಶಿ ಷಡಾಕ್ಷರಪ್ಪ ತಿಳಿಸಿದರು.

ಮೋಟಾರ್‌ ಖರೀದಿ ಗೋಲ್‌ಮಾಲ್‌; ತಂದಿದ್ದು 2, ರಶೀದಿ 14ಕ್ಕೆ : ಆರೋಪ
14ನೇ ಹಣಕಾಸು ನಿಧಿ, ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳಲ್ಲಿ ಭಾರೀ ಗೋಲ್‌ಮಾಲ್‌ ನಡೆಯುತ್ತಿದೆ ಎಂದು ದಿಶಾ ಸಮಿತಿಯ ಸದಸ್ಯರು ಸಭೆಯಲ್ಲಿ ಆರೋಪಿಸಿದರು. ಸದಸ್ಯ ಪರಮಶಿವ ವಿಷಯ ಪ್ರಸ್ತಾಪಿಸಿ, ತೋರಣಗಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 14ನೇ ಹಣಕಾಸು ನಿಧಿ ಅನುದಾನ ಬಳಕೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಮೋಟಾರ್‌ ಖರೀದಿಯಲ್ಲಂತೂ ಅಧಿಕಾರಿಗಳು ಹಣ ಲಪಟಾಯಿಸಿದ್ದಾರೆ. 2 ಮೋಟಾರ್‌ ಖರೀದಿಸಿ, 14 ಮೋಟಾರ್‌ ಖರೀದಿಗೆ ರಶೀದಿ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ಇನ್ನೋರ್ವ ಸದಸ್ಯ ಮಂಜಾನಾಯ್ಕ ಮಾತನಾಡಿ, ಎನ್‌ಆರ್‌ಇಜಿ ಕಾಮಗಾರಿಗಳಲ್ಲಿ ಗುಣಮಟ್ಟ ಇರುವುದಿಲ್ಲ. ಫೋಟೊ ತೋರಿಸಿ, ಹಣ ಬಿಡುಗಡೆ ಮಾಡಲಾಗುತ್ತಿದೆ. 14ನೇ ಹಣಕಾಸು ನಿಧಿ ಬಳಕೆ ಕುರಿತು ಅಧಿಕಾರಿಗಳು ಯಾವುದೇ ಕಡತ ಪರಿಶೀಲನೆಗೆ ಕೊಡುವುದೇ ಇಲ್ಲ. ನನ್ನ ಬಳಿ ಇಲ್ಲ, ಬೀಗ ಇಲ್ಲ ಹೀಗೆ ಒಂದಿಲ್ಲೊಂದು ಸಬೂಬು ಹೇಳುತ್ತಾರೆ ಎಂದು ಆರೋಪಿಸಿದರು.

ಮತ್ತೋರ್ವ ಸದಸ್ಯ ಲಕ್ಷ್ಮಣ್‌ ಮಾತನಾಡಿ, ಸಿಎಫ್‌ಎಲ್‌ ಬಲ್ಬ್ ಖರೀದಿಯಲ್ಲೂ ಇಂತಹ ಅಕ್ರಮ ನಡೆದಿವೆ. ಸಿಎಫ್‌ಎಲ್‌ ಬಲ್ಬ್ ಖರೀದಿಸಿದರೆ ಬಹುತೇಕ ಕಂಪನಿಗಳು 6 ತಿಂಗಳ ಗ್ಯಾರಂಟಿ ಕೊಡುತ್ತವೆ. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ರಶೀದಿ ಇಲ್ಲ. ಹೋದ ಬಲ್ಬ್ ಗಳು ಎಲ್ಲಿ ಎಂದರೆ ಉತ್ತರ ಇಲ್ಲ. ತೋರಣಗಟ್ಟ ಗ್ರಾಪಂ ವ್ಯಾಪ್ತಿಲ್ಲಿ 6 ತಿಂಗಳಲ್ಲಿ 750 ಬಲ್ಬ್ ಖರೀದಿಸಲಾಗಿದೆ. ಯಾವುದಕ್ಕೂ ರಶೀದಿ ಇಲ್ಲ. ಇನ್ನೂ ದುರಂತ ಅಂದರೆ ಖರೀದಿಸಿ ಸಿಎಫ್‌ಎಲ್‌ ಬಲ್ಬ್ ಗಳು ಯಾವುದೇ ಗ್ರಾಮದ ಬೀದಿ ದೀಪದ ಕಂಬಗಳಲ್ಲಿ ಕಾಣುವುದಿಲ್ಲ ಎಂದು ಸಭೆ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಇದೀಗ ಎಲ್ಲಾ ಅನುದಾನ ಬಳಕೆ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಅನೇಕ ಅಧಿಕಾರಿಗಳು, ಜನಪ್ರತಿನಿಧಿಗಳ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದೆ. ಹೀಗಾಗಿ ಈಗ ಅಂತಹ ಅಕ್ರಮ ನಡೆಯುತ್ತಿಲ್ಲ ಎಂದು ಸಮಜಾಯಿಷಿ ನೀಡಿದರು. ಸಂಸದ ಸಿದ್ದೇಶ್ವರ್‌ ಮಾತನಾಡಿ, ಎನ್‌ಆರ್‌ ಇಜಿ ಸೇರಿದಂತೆ ಹಲವು ಕೇಂದ್ರದ ಯೋಜನೆಗಳ ಅನುದಾನ ದುರ್ಬಳಕೆ ಆಗುತ್ತಿದೆ. ಇದಕ್ಕೆ ಹೊಣೆ ಯಾರು? ಎಂಬುದನ್ನು ಪತ್ತೆಮಾಡಿ, ಕಾನೂನು ಕ್ರಮ ಜರುಗಿಸಿ. ಜಗಳೂರು ತಾಲ್ಲೂಕಲ್ಲಿ ಅತಿ ಹೆಚ್ಚುಕ್ರಿಮಿನಲ್‌ ಮೊಕದ್ದಮೆ ದಾಖಲಾಗಿವೆ. ಇತ್ತ ಹೆಚ್ಚಿನ ಗಮನ ಹರಿಸಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next