Advertisement

ಸಮೃದ್ಧ ಜಲಮೂಲ ನಿರ್ಲಕ್ಷಿಸಿ ನೀರಿಗೆ ಹಂಗಾಮಿ ವ್ಯವಸ್ಥೆ

02:16 PM May 08, 2019 | Team Udayavani |

ಹೊನ್ನಾವರ: ಕಾರವಾರದಿಂದ ಭಟ್ಕಳದವರೆಗೆ 140 ಕಿಮೀ ವ್ಯಾಪ್ತಿಯಲ್ಲಿ ಐದು ನದಿಗಳು, ಮೂರು ಹೊಳೆಗಳು ಬೇಸಿಗೆಯಲ್ಲಿ ತುಂಬಿ ಹರಿಯುತ್ತಿದ್ದರೂ ಈ ನೀರನ್ನು ಎತ್ತಿ ಜನತೆಗೆ ಮತ್ತು ಭೂಮಿಗೆ ಉಣಿಸಲಾರದ ಆಡಳಿತ ಮತ್ತು ರಾಜಕಾರಣಿಗಳು ಪ್ರತಿವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಕುರಿತು ಹೇಳಿಕೆಗಳನ್ನು ನೀಡುತ್ತ ಗಂಟಲು ಒಣಗಿಸಿಕೊಳ್ಳುತ್ತಿದ್ದಾರೆ. ಜನರ ಗಂಟಲನ್ನು ಪ್ರತಿವರ್ಷವೂ ಒಣಗಿಸುತ್ತಾರೆ. ಇದು ಪ್ರತಿವರ್ಷದ ಮಹಾಮೋಸ ಎನ್ನಬಹುದು.

Advertisement

ಮಳೆ ಮರಗಳ ಮೇಲೆ ಬಿದ್ದು ನಿಧಾನ ಇಳಿದು ನೆಲದಲ್ಲಿ ಇಂಗಿ ಹಳ್ಳಿ, ನಗರಗಳ ಬಾವಿಗಳಿಗೆ ಜಲಮೂಲವಾಗಿ ನಿಲ್ಲುತ್ತಿಲ್ಲ. ಮರಗಳು ಕಡಿದು ಹೋದಂತೆ ಮಳೆ ಗುಡ್ಡದ ಇಳಿಜಾರಿನಲ್ಲಿ ಇಳಿದು ಹೊಳೆ ಹಳ್ಳ, ನದಿ ಸೇರಿ ಸಮುದ್ರ ಪಾಲಾಗುತ್ತದೆ. ಪ್ರತಿ ತೋಟದಲ್ಲೂ ನಾಲ್ಕಾರು ಕೆರೆ ಬಾವಿಗಳಿದ್ದವು. ಕುಟುಂಬಗಳು ವಿಭಜನೆಗೊಂಡಂತೆ ಬಾವಿ ಕೆರೆಗಳು ಮುಚ್ಚಿಹೋಗಿ ಬೋರ್‌ವೆಲ್ಗಳ ಯುಗ ಆರಂಭವಾಗಿ ಎರಡು ದಶಕಗಳಲ್ಲಿ ಅಸಂಖ್ಯ ಬೋರ್‌ವೆಲ್ಗಳು ಭೂಮಿಯನ್ನು ತೂತು ಮಾಡಿ ನೀರೆತ್ತಿದವು. ಜಲಮೂಲ ಕಥೆ ಮುಗಿದಿದೆ. ಕುಡಿಯುವ ನೀರಿನ ತತ್ವಾರ ಆರಂಭವಾಗಿ ದಶಕ ಕಳೆಯಿತು. ಪ್ರತಿ ಬೇಸಿಗೆಯಲ್ಲೂ ಸರ್ಕಾರ ತೇಪೆ ಹಾಕುವ ಕೆಲಸ ಮಾಡುತ್ತಿದೆ. ನದಿ ತೀರದ ಊರುಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದೆ. ಹಳ್ಳಿಗಳಲ್ಲಿ ನಾಲ್ಕಾರು ಜನರ ಕುಟುಂಬಗಳಿಗೆ ಕುಡಿಯಲು ಮಾತ್ರವಲ್ಲ ಸ್ನಾನಕ್ಕೆ, ಬಟ್ಟೆ ಒಗೆಯಲು, ದನಕರುಗಳಿಗೆ ನೀರು ಬೇಕು. ತೋಟ ಒಣಗಿ ಹೋಗಿದೆ. ಕುಡಿಯುವ ನೀರಿನ ಸಮಸ್ಯೆ ಇಲ್ಲ. ಎಲ್ಲೆಡೆ ನೀರು ಪೂರೈಸಲಾಗುತ್ತಿದೆ, ಬೋರ್‌ವೆಲ್ಗಳ ದುರಸ್ತಿಯಾಗುತ್ತಿದೆ, ಕುಡಿಯುವ ನೀರಿನ ಪೂರೈಕೆಗೆ ಸಾಕಷ್ಟು ಹಣ ಕಾದಿಟ್ಟಿದೆ ಇತ್ಯಾದಿ ಹೇಳಿಕೆಗಳು ಸರ್ಕಾರದಿಂದ ಬರುತ್ತಿದೆ. ಜೊತೆಜೊತೆಯಲ್ಲಿ ಮಳೆಗಾಲ ತಿಂಗಳಿರುವಾಗಲೇ ಮಳೆ ಅನಾಹುತದ ಪೂರ್ವ ಸಿದ್ಧತಾಸಭೆಯೂ ನಡೆಯುತ್ತದೆ. ಇಂತಹ ಕಾಟಾಚಾರದ ಸಭೆಗಳು ಪತ್ರಿಕೆಯ ಪುಟ ತುಂಬಲಷ್ಟೇ ಸಾಕು.

ಜಲಮೂಲವಿಲ್ಲದ ಬಳ್ಳಾರಿ, ಬಾಗಲಕೋಟೆ, ಬೀದರ್‌ನಂತಹ ಪ್ರದೇಶದಲ್ಲಿ ಕುಡಿಯುವ ನೀರಿಗೆ ಬರಬಂದರೆ ತಾತ್ಪೂರ್ತಿಕ ವ್ಯವಸ್ಥೆ ಅನಿವಾರ್ಯ. ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ, ವೆಂಕ್ಟಾಪುರ ನದಿಗಳು, ಗುಂಡಬಾಳದಂತಹ ಹೊಳೆಗಳು ಈಗಲೂ ತುಂಬಿ ಹರಿಯುತ್ತಿವೆ. ಒಂದೊಂದು ಸರ್ಕಾರ ಒಂದೊಂದು ತಾಲೂಕಿಗೆ ಕುಡಿಯುವ ನೀರಿಗೆ ಶಾಶ್ವತ ವ್ಯವಸ್ಥೆ ಮಾಡಿದ್ದರೆ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ತಪ್ಪುತ್ತಿತ್ತು ಮಾತ್ರವಲ್ಲ ಭಟ್ಕಳದಿಂದ ಕಾರವಾರದವರೆಗಿನ ರಾ. ಹೆದ್ದಾರಿ ಎಡಬಲದ ಗದ್ದೆ, ಗುಡ್ಡಗಳು ಹಸಿರಿನಿಂದ ನಳನಳಿಸುತ್ತಿದ್ದವು. ಇಂತಹ ಯೋಜನೆ ಯಶಸ್ವಿ ಎಂಬುದಕ್ಕೆ ಮುರ್ಡೇಶ್ವರ, ಇಡಗುಂಜಿ ಉದಾಹರಣೆಯಾಗಿದೆ. ರಾಜೀವ ಗಾಂಧಿ ಸಬ್‌ಮಿಶನ್‌ ಯೋಜನೆ ಅನ್ವಯ 1ಕೋಟಿ ರೂಪಾಯಿ ವಂತಿಗೆ ಸಹಿತ 4ಕೋಟಿ ರೂ. ವೆಚ್ಚದಲ್ಲಿ ಮುರ್ಡೇಶ್ವರಕ್ಕೆ ಕುಡಿಯುವ ನೀರನ್ನು ಒಯ್ಯಲಾಗಿದೆ. ಬಳಕೂರಿನಿಂದ ಶರಾವತಿ ನೀರೆತ್ತಿ ಗುಡ್ಡಕ್ಕೆ ಹರಿಸಿ, ಅಲ್ಲಿಂದ ಇಳಿಜಾರಿನಲ್ಲಿ 30ಕಿಮೀ ಮುರ್ಡೇಶ್ವರಕ್ಕೆ ನೀರು ತಲುಪಿದೆ. ಇಡಗುಂಜಿ ಕ್ಷೇತ್ರಕ್ಕೂ ದೇವಸ್ಥಾನ ಖರ್ಚಿನಲ್ಲಿ ಇಂತಹದೇ ಯೋಜನೆ ರೂಪಿಸಿದೆ. ಇದನ್ನು ನೋಡಿ ಅನುಸರಿಸಬಹುದಿತ್ತು. ಗೇರಸೊಪ್ಪಾದಿಂದ ಹೊನ್ನಾವರದವರೆಗಿನ 12 ಗ್ರಾಪಂ ಮತ್ತು ಹೊನ್ನಾವರ ಪಟ್ಟಣದ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು, ಅರಣ್ಯ ಭೂಮಿ ಬಿಡುಗಡೆಯಾಗಬೇಕಿದೆ. ಶಾಸಕಿ ಶಾರದಾ ಶೆಟ್ಟಿ ಕಾಲದಿಂದ ದಿನಕರ ಶೆಟ್ಟಿಯವರ ಕಾಲಕ್ಕೆ ಯೋಜನೆ ಸ್ಪಷ್ಟರೂಪ ಪಡೆದಿದೆ.

ಅಘನಾಶಿನಿಯ ನೀರು ಕುಮಟಾ, ಹೊನ್ನಾವರ ನಗರಕ್ಕೆ ಬಂದಿದ್ದು ಹಳತಾಗಿದೆ. ನೇರ ಶಹರಕ್ಕೆ ಬರುವ ಬದಲು ಆಸುಪಾಸಿನ ಹಳ್ಳಿಗಳನ್ನು ಕೂಡಿ ಬಂದರೆ ಎಲ್ಲರ ಸಮಸ್ಯೆಯೂ ನಿವಾರಣೆಯಾಗುತ್ತಿತ್ತು. ನಗರಗಳು ತಗ್ಗು ಪ್ರದೇಶದಲ್ಲಿವೆ, ಹಳ್ಳಿಗಳು ಇಳಿಜಾರಿನಲ್ಲಿವೆ. ಮುರ್ಡೇಶ್ವರ ಯೋಜನೆಯಂತೆ ಎತ್ತರದಿಂದ ನೀರು ಹರಿಸಿದರೆ ಸಾಕಿತ್ತು. ಇಂತಹ ಒಂದೇ ಒಂದು ಯೋಜನೆಯನ್ನು ಜಾರಿಗೆತರದ ಸರ್ಕಾರ ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ ಎನ್ನುವಂತೆ ಮಾಡಿದೆ.

ಕುಡಿಯುವ ನೀರಿಗೆ ಸರದಿಯಲ್ಲಿ ನಿಂತ ಮಹಿಳೆಯರು, ಮಕ್ಕಳು, ಖಾಲಿ ಕೊಡಗಳು, ಟ್ಯಾಂಕರ್‌ ಮೂಲಕ ನೀರು ಹನಿಸುವ ಚಿತ್ರಗಳು ಪ್ರತಿ ಬೇಸಿಗೆಯಲ್ಲಿ ರಾರಾಜಿಸುತ್ತವೆ. ಕಾಳಜಿ ಯಾರಿಗಿದೆ ?

Advertisement
Advertisement

Udayavani is now on Telegram. Click here to join our channel and stay updated with the latest news.

Next