ವರದಿ:ಬಸವರಾಜ ಹೂಗಾರ
ಹುಬ್ಬಳ್ಳಿ: ಕರ್ಫ್ಯೂ ನಿಯಮಗಳನ್ನು ಸಡಿಲಗೊಳಿಸಿರುವ ಜಿಲ್ಲಾಧಿಕಾರಿಗಳ ಆದೇಶ ಹಲವರಲ್ಲಿ ಗೊಂದಲವನ್ನುಂಟು ಮಾಡಿಕೊಟ್ಟಿದೆ.
ಜಿಲ್ಲೆಯಲ್ಲಿ ಕಠಿಣ ಕರ್ಫ್ಯೂ ಜಾರಿ ಸಂದರ್ಭದಲ್ಲಿ ತರಕಾರಿ, ಆಹಾರ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ-ಮಾರಾಟಕ್ಕೆ ಕೆಲಹೊತ್ತಿನ ಸಡಿಲಿಕೆ ಹೊರತುಪಡಿಸಿ ಇನ್ನೆಲ್ಲವಕ್ಕೂ ನಿರ್ಬಂಧ ಹೇರಲಾಗಿತ್ತು. ಕೆಲ ದಿನಗಳ ನಂತರ ಜನಪ್ರತಿನಿಧಿ ಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಒತ್ತಡ ಹೆಚ್ಚಾದಂತೆ ಜೂ.1ರಿಂದ ಕೆಲ ನಿರ್ಬಂಧಗಳನ್ನು ಸಡಿಲಗೊಳಿಸಿ ಆದೇಶ ಜಾರಿ ಮಾಡಲಾಗಿದೆ. ಆದರೆ ಈ ಸಡಿಲಿಕೆ ಯಾರಿಗೆ? ಯಾವುದಕ್ಕೆ? ಎಂಬುದು ತಿಳಿಯದಂತಾಗಿದೆ.
ಜೂ. 1ರಿಂದ ಹೋಟೆಲ್ ಪಾರ್ಸಲ್‌ಗೆ ಅನುವು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಬಹುತೇಕ ಹೋಟೆಲ್‌ಗಳು ಮಂಗಳವಾರ ಕಾರ್ಯನಿರ್ವಹಿಸದಿರುವುದು ಕಂಡುಬಂದಿತು. ಆದೇಶದ ಪ್ರಕಾರ ಬೆಳಗ್ಗೆ 6ರಿಂದ 8 ಗಂಟೆವರೆಗೆ ಹೋಟೆಲ್‌ಗಳು ಪಾರ್ಸಲ್ ನೀಡಬಹುದು. ನಂತರ ಸಂಜೆ 4 ಗಂಟೆವರೆಗೆ ಮನೆಗಳಿಗೆ ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ. ಕೇವಲ ಎರಡು ತಾಸುಗಳಲ್ಲಿ ತಿಂಡಿ-ತಿನಿಸು ತಯಾರಿಸಿ ಪಾರ್ಸಲ್ ನೀಡುವುದು ಕಷ್ಟಸಾಧ್ಯ ಎಂಬ ಅಭಿಪ್ರಾಯ ಹಲವು ಹೋಟೆಲ್ ಮಾಲೀಕರದ್ದಾಗಿದೆ.
ಮನೆಗಳಿಗೆ ತಿಂಡಿ-ತಿನಿಸು ಪೂರೈಕೆ ಅವಕಾಶ ಎರಡು ಪ್ರತಿಷ್ಟಿತ ಸಂಸ್ಥೆಗಳಿಗೆ ನೀಡಲಾಗಿದೆ. ವಿಪರ್ಯಾಸವೆಂದರೆ ಈ ಎರಡು ಕಂಪನಿಗಳಿಗೆ ಹುಬ್ಬಳ್ಳಿಯಲ್ಲಿನ ಬೆರಳೆಣಿಕೆಯಷ್ಟು ಹೋಟೆಲ್‌ಗಳು ನೋಂದಾಯಿತಗೊಂಡಿವೆ. ಇನ್ನುಳಿದ ಯಾವುದೇ ಹೋಟೆಲ್‌ಗಳಿಗೆ ಇದರಿಂದ ಪ್ರಯೋಜನವಿಲ್ಲ. ಒಂದೆಡೆ ಜನಪ್ರತಿನಿ ಧಿಗಳು ಹಾಗೂ ಜಿಲ್ಲಾಡಳಿತ ಹೋಟೆಲ್ ಉದ್ಯಮಕ್ಕೆ ನೆರವಾಗಲು ಆದೇಶ ಮಾರ್ಪಾಡು ಮಾಡಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದರೆ, ಕೇವಲ ಎರಡು ಗಂಟೆಗಳ ಕಾಲ ಪಾರ್ಸಲ್‌ಗೆ ಅನುವು ಮಾಡಿ, ಸಂಜೆ 4 ಗಂಟೆ ನಂತರ ಮನೆಗಳಿಗೆ ಪೂರೈಕೆಗೆ ಅವಕಾಶ ಮಾಡಿಕೊಟ್ಟಿರುವುದು ಹೋಟೆಲ್ ಉದ್ಯಮಿಗಳಿಗೆ ತಲೆಕೆಡಿಸಿಕೊಳ್ಳುವಂತೆ ಮಾಡಿದೆ.