ಶಹಾಬಾದ: ಉಪನ್ಯಾಸಕರು ಆಯ್ಕೆ ಮಾಡಿಕೊಂಡಿರುವ ಉಪನ್ಯಾಸಕ ವೃತ್ತಿಗೆ ನ್ಯಾಯ ಒದಗಿಸುವಂತ ಕೆಲಸವಾದರೆ
ಗುಣಮಟ್ಟದ ಫಲಿತಾಂಶ ಪಡೆಯಲು ಸಾಧ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜ ಡಿ. ಕಲಬುರಗಿ ಹೇಳಿದರು.
ನಗರದ ರಾಷ್ಟ್ರ ಭಾಷಾ ಶಿಕ್ಷಣ ಸಮಿತಿಯಲ್ಲಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ನಗರದ ಸಿ.ಎ. ಇಂಗಿನಶೆಟ್ಟಿ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಪಿಯುಸಿ ಫಲಿತಾಂಶ ಸುಧಾರಣೆಗೆ ಕಾಲೇಜಿನ ಉಪನ್ಯಾಸಕರಿಗೆ ಆಯೋಜಿಸಲಾಗಿದ್ದ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರ ಕಾರ್ಯಸಾಧನೆಗೆ ಸಮಾಜದಿಂದ ಸೂಕ್ತ ಪ್ರೋತ್ಸಾಹ ಸಿಗದಿದ್ದರೂ, ನಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಕೊಡುವ ಗೌರವ ಎಲ್ಲಕ್ಕಿಂತ ದೊಡ್ಡದು. ಶಿಕ್ಷಕರಲ್ಲಿ ಈಗ ತಲೆಮಾರಿನ ಅಂತರವಾಗಿದ್ದು, ಮೌಲ್ಯಗಳು ಕಡಿಮೆಯಾಗುತ್ತಿವೆ.
ಉಪನ್ಯಾಸಕ ವೃತ್ತಿ ಪ್ರೀತಿಸಿ, ಗೌರವಿಸಬೇಕು. ಕೊಠಡಿಯಲ್ಲಿ ಸರಿಯಾಗಿ ಪಾಠ ಮಾಡಿದರೆ ಸಾಲದು. ಹೆಚ್ಚಿನ ಸಮಯ ನಿಯೋಗಿಸಿ ಮಕ್ಕಳಿಗೆ ಮನದಟ್ಟಾಗುವಂತೆ ವಿಷಯ ಕಲಿಸಬೇಕು. ಅಲ್ಲದೇ ವಿಷಯ ಕ್ಲಿಷ್ಟ ಎಂಬುದನ್ನು ಹೋಗಲಾಡಿಸಲು ವಿದ್ಯಾರ್ಥಿಗಳಿಗೆ ಪಾಠ ಮಾಡುವುದರೊಂದಿಗೆ ಪ್ರಶ್ನೆ ಪತ್ರಿಕೆ ಕಾರ್ಯಾಗಾರ ಹಮ್ಮಿಕೊಳ್ಳುವುದು ಅವಶ್ಯಕವಿದೆ. ಮಕ್ಕಳಲ್ಲಿ ಪ್ರತಿಭೆ ಇದೆ.ಅದನ್ನು ಹೊರಹಾಕಲು ನಿಮ್ಮ ಸ್ವಲ್ಪ ಪ್ರಯತ್ನ ಅವರ ಜೀವನದ ದಿಕ್ಕು ಬದಲಾಯಿಸಬಹುದು.
ಫಲಿತಾಂಶದಲ್ಲಿ ಏರಿಕೆ ಕಾಣಬೇಕಾದರೆ ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಜವಾಬ್ದಾರಿ ಹೆಚ್ಚಿನದಿದೆ. ಆದ್ದರಿಂದ ಉಪನ್ಯಾಸಕರು ತಾವು ಏತಕ್ಕಾಗಿ ಇಲ್ಲಿ ಬಂದಿದ್ದೇವೆ. ನಿಮ್ಮ ಸಂಬಳ ಯಾರಿಂದ ಬರುತ್ತಿದೆ. ಸಂಬಳಕ್ಕೆ ತಕ್ಕಂತೆ ನಾವು ಸಮರ್ಪಕ ಕಾರ್ಯ ಮಾಡಿದ್ದೇವೆ ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಂಡು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕಾದುದು ನಿಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಚಂದ್ರಕಾಂತ ಔಂಟೆ, ಅಂಜುಮನ್ ಕಾಲೇಜಿನ ಪ್ರಾಂಶುಪಾಲ ಪೀರಪಾಷಾ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಸವರಾಜ ಕೊಳಕೂರ ಇದ್ದರು. ರಾಜಕುಮಾರ ಬಾಸೂತ್ಕರ್ ಸ್ವಾಗತಿಸಿದರು ಉಪನ್ಯಾಸಕ ಪ್ರವೀಣ ರಾಜನ ನಿರೂಪಿಸಿದರು. ಉಪನ್ಯಾಸಕ ರಮೇಶ ವಾಲಿ ವಂದಿಸಿದರು.