Advertisement

ಪಿಂಚಣಿ ಗೊಂದಲಕ್ಕೆ ಶೀಘ್ರ ಪರಿಹಾರ: ಪ್ರದೀಪ್‌ ಕುರ್ಡೇಕರ್‌

01:00 AM Jan 31, 2019 | Harsha Rao |

ಉಡುಪಿ: ಆರು ತಿಂಗಳಿನಿಂದ ಬಾಕಿಯಾಗಿರುವ ಪಿಂಚಣಿ ಯೋಜನೆಗಳು ಖಾತೆಗೆ ಶೀಘ್ರ ಜಮೆಯಾಗಲಿವೆ ಎಂದು ತಹಶೀಲ್ದಾರ್‌ ಪ್ರದೀಪ್‌ ಕುರ್ಡೇಕರ್‌ ಹೇಳಿದರು.

Advertisement

ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜರಗಿದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಖಾತೆಗೆ ಹಣ ಜಮೆ ಮಾಡುವುದರಿಂದ ಅನಾರೋಗ್ಯ ಪೀಡಿತರಿಗೆ ತೊಂದರೆಯಾಗುತ್ತಿದೆ ಎಂದು ಡಾ| ಸುನೀತಾ ಶೆಟ್ಟಿ ಆರೋಪಿದಾಗ ಅಂತಹವರ ಪಟ್ಟಿ ಮಾಡಿ ನೀಡುವಂತೆ ತಹಶೀಲ್ದಾರರು ತಿಳಿಸಿದರು.

ಎಲ್ಲ ಗ್ರಾ.ಪಂ.ಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಪ್ರಗತಿ ಕಾಣುತ್ತಿಲ್ಲ. ಆದೇಶವಿಲ್ಲದೆ ಈ ಯೋಜನೆಯನ್ನು ಮೊಟಕುಗೊಳಿಸಲಾಗಿದೆ. ಈ ಬಗ್ಗೆ ಕಾರಣ ನೀಡುವಂತೆ ಪಂಚಾಯತ್‌ ಅಧ್ಯಕ್ಷರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ. ಅಧ್ಯಕ್ಷೆ, ಮುಂದಿನ ಆದೇಶ ಬಂದ ಅನಂತರ ಸ್ಪಷ್ಟ ಮಾಹಿತಿ ನೀಡುವುದಾಗಿ ತಿಳಿಸಿದರು.

ಸದಸ್ಯೆ ವಸಂತಿ ಪೂಜಾರಿ ಮಾತನಾಡಿ, ಹಾರಾಡಿ ಗ್ರಾ.ಪಂ. ಸಿಬಂದಿ ಪಂಚಾಯತ್‌ಗೆ ಬರುವ ಜನಸಾಮಾನ್ಯರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಹಣಾಧಿಕಾರಿ ರಾಜು ಕೆ. ಗ್ರಾ.ಪಂ. ಸಿಬಂದಿ ಲೋಪವೆಸಗಿದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

Advertisement

ಟೋಲ್‌ ವಿನಾಯಿತಿ ನೀಡಿ

ಹೆಜಮಾಡಿಯ ಒಳ ರಸ್ತೆಗೆ ಕೂಡ ಟೋಲ್‌ ಅಳವಡಿಸಿದ್ದು, ಯಾರಿಗೂ ವಿನಾಯಿತಿ ನೀಡುತ್ತಿಲ್ಲ ಎಂದು ರೇಣುಕಾ, ಕೆಲವು ಕಡೆ ಸರ್ವೀಸ್‌ ರಸ್ತೆ ಆಗಲಿಲ್ಲ. ಆದರೂ ಇಲ್ಲಿ ಟೋಲ್‌ ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ಪರಿಶೀಲನೆಯಾಗಬೇಕು ಎಂದು ದಿನೇಶ ಕೋಟ್ಯಾನ್‌ ಹೇಳಿದರು. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಮಾರ್ಚ್‌ ಒಳಗೆ ಬಾರಕೂರು ಸೇತುವೆ ಕಾಮಗಾರಿ

ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಉಪ್ಪುನೀರಿನ ಸಮಸ್ಯೆ ಇದ್ದು, ವಾರಾಹಿ ನೀರು ಇಲ್ಲಿಗೆ ಅಧಿಕ ಪ್ರಮಾಣದಲ್ಲಿ ಬಿಡುಗಡೆಗೊಳಿಸಬೇಕು. ಇದರಿಂದ ಕುಡಿಯುವ ನೀರಿನ ಸಮಸ್ಯೆ ದೂರವಾಗುತ್ತದೆ. ಅಲ್ಲದೆ ಉಪ್ಪು ನೀರಿನ ಸಮಸ್ಯೆಯೂ ಬಗೆಹರಿಯುತ್ತದೆ. ಅಲ್ಲದೆ ಬಾರಕೂರು ಸೇತುವೆಯೂ ದುರಸ್ತಿಯಾಗಬೇಕಿದೆ ಎಂದು ಬಾರಕೂರು ಗ್ರಾ.ಪಂ. ಅಧ್ಯಕ್ಷೆ ಶೈಲಾ ಹೇಳಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧ್ಯಕ್ಷರು ಸೂಚಿಸಿದರು. ಬಾರಕೂರು ಸೇತುವೆಗೆ ಅನುದಾನ ದೊರಕಿದ್ದು, ಮಾರ್ಚ್‌ ಒಳಗೆ ಕಾಮಗಾರಿ ಪುರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮಜೂರು ಗ್ರಾ.ಪಂ. ಅಧ್ಯಕ್ಷ ಸಂದೀಪ್‌ ರಾವ್‌ ಮಾತನಾಡಿ, ಪಾದೂರು ತೈಲಾಗಾರ ಕಾಮಗಾರಿ ಸಂದರ್ಭ ಸ್ಫೋಟಗೊಂಡು ಹಾನಿಯಾದ ಮನೆಗಳಿಗೆ ಇದುವರೆಗೂ ಪರಿಹಾರ ಲಭಿಸಿಲ್ಲ ಎಂದರು. ಇದಕ್ಕೆ ತಹಶೀಲ್ದಾರ್‌ ಪ್ರತಿಕ್ರಿಯಿಸಿ ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ನ್ಯಾಯ ಒದಗಿಸಿ

ವಡ್ಡರ್ಸೆ ಗ್ರಾ.ಪಂ. ಕಾವಡಿ ಗ್ರಾಮದ ಶಾಂತಿನಗರದಲ್ಲಿ 40 ಮನೆಯಲ್ಲಿ 11 ಮನೆಯವರಿಗೆ ದಾಖಲಾತಿ ಇಲ್ಲ. ಇದಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ತಾ.ಪಂ.ಸದಸ್ಯ ಗುಂಡು ಶೆಟ್ಟಿಯವರು ಆಗ್ರಹಿಸಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅಧ್ಯಕ್ಷರು ತಿಳಿಸಿದರು.

ಗೋಮಾಳದಲ್ಲಿ ಗೋಶಾಲೆ

ಎಲ್ಲೂರು ಗ್ರಾಮದಲ್ಲಿರುವ ಸುಮಾರು 42 ಎಕರೆ ಗೋಮಾಳ ಪ್ರದೇಶದಲ್ಲಿ 10 ಎಕರೆ ಪ್ರದೇಶದಲ್ಲಿ ಗೋಶಾಲೆ ನಿರ್ಮಿಸುವುದಾಗಿ ಗ್ರಾ.ಪಂ.ನಲ್ಲಿ ನಿರ್ಣಯ ಆಗಿದ್ದು, ತಾ.ಪಂ. ಸಹಕಾರ ಬೇಕು ಎಂದು ಕೇಶವ ಮೊಲಿ ಕೇಳಿಕೊಂಡರು. ಕಾನೂನು ರೀತಿಯಲ್ಲಿ ಇದು ಸಾಧ್ಯವೇ ಎಂದು ಪರಿಶೀಲಿಸಿದ ಬಳಿಕ ಈ ಬಗ್ಗೆ ತೀರ್ಮಾನಿಸುವುದಾಗಿ ಕಾರ್ಯನಿರ್ವಹಣಾಧಿಕಾರಿಯವರು ತಿಳಿಸಿದರು.

ತಾ.ಪಂ. ಉಪಾಧ್ಯಕ್ಷ ರಾಜೇಂದ್ರ ಪಿ., ಸಹಾಯಕ ನಿರ್ದೇಶಕ ಹರಿಕೃಷ್ಣ ಶಿವತ್ತಾಯ ಉಪಸ್ಥಿತರಿದ್ದರು. ಮಂಗನ ಕಾಯಿಲೆಗೆ ಸಂಬಂಧಿಸಿದ ಮಾಹಿತಿ ಕೈಪಿಡಿಯನ್ನು ತಾ.ಪಂ. ಅಧ್ಯಕ್ಷರು ಬಿಡುಗಡೆಗೊಳಿಸಿದರು. ಶ್ರೀಸಿದ್ದಗಂಗಾ ಸ್ವಾಮೀಜಿ ಮತ್ತು ಜಾರ್ಜ್‌ ಫೆರ್ನಾಂಡಿಸ್‌ರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next