ಗದಗ: ಕಾಲು ಮತ್ತು ಬಾಯಿ ಬೇನೆ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ಅಕ್ಟೋಬರ್ 14 ರಿಂದ ನವೆಂಬರ್ 4 ರ ವರೆಗೆ ರಾಜ್ಯಾದ್ಯಂತ ಜಾನುವಾರುಗಳಿಗೆ ಕಾಲು ಮತ್ತು ಬಾಯಿ ಲಸಿಕೆ ಹಾಕಲಾಗುತ್ತದೆ. ಎಲ್ಲ ರೈತರು ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಗ್ರಾಮೀಣ ಭಾಗದಲ್ಲಿ ಸಮರ್ಪಕ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅಧಿಕಾರಿಗಳಿಗೆ ಸೂಚಿಸಿದರು.
ಜಾನುವಾರುಗಳಿಗೆ ಬರುವ ಬಾಯಿ ಮತ್ತು ಕಾಲು ರೋಗ ನಿಯಂತ್ರಣದ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲಸಿಕೆ ಕಾರ್ಯಕ್ರಮ ಕುರಿತು ಪ್ರತಿ ಗ್ರಾ.ಪಂಗೆ ಮಾಹಿತಿ ನೀಡಿ, ಆ ಮೂಲಕ ಪ್ರತಿಯೊಂದು ಹಳ್ಳಿಯಲ್ಲೂ ವ್ಯಾಪಕ ಪ್ರಚಾರಕ್ಕೆ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ| ಚೆನ್ನಕೇಶವಯ್ಯ ಮಾತನಾಡಿ, ಜಾನುವಾರುಗಳಿಗೆ ಲಸಿಕಾ ಕಾರ್ಯಕ್ರಮವನ್ನು ಗದಗ ಸೇರಿದಂತೆ ರಾಜ್ಯಾದ್ಯಂತ ಎಲ್ಲೆಡೆ ಅ.14ರಿಂದ ನ.4ರ ವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 1,83,044 ಜಾನುವಾರುಗಳಿಗೆ ಲಸಿಕೆ ಹಾಕಲಾಗುವುದು. ಜಿಲ್ಲೆಯಲ್ಲಿ ಒಟ್ಟು 326 ಗ್ರಾಮಗಳಿದ್ದು, 106 ಗ್ರಾ.ಪಂ ಹಾಗೂ ಒಟ್ಟು 1172 ಬ್ಲಾಕ್ ರಚನೆ ಮಾಡಲಾಗಿದೆ ಎಂದರು.
ಲಸಿಕಾ ತಂಡಗಳಿಗೆ ಗದುಗಿನ ಕರ್ನಾಟಕ ಹಾಲು ಒಕ್ಕೂಟದಿಂದ ವಾಹನಗಳ ಸೌಲಭ್ಯ ಕಲ್ಪಿಸಲಿದೆ. ಪ್ರತಿಯೊಬ್ಬ ರೈತರ ಮನೆ ಮನೆಗೆ ಭೇಟಿ ನೀಡಿ, ಅವರ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕಿ, ಆನ್‌ಲೈನ್‌ನಲ್ಲಿ ಮಾಹಿತಿ ಅಪ್‌ಡೇಟ್ ಮಾಡುವವರು ಎಂದು ಸಭೆಗೆ ವಿವರಿಸಿದರು.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ, ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಸಂಘದ ಡಾ|ಬಿ.ಎಸ್.ಅಂಗಡಿ ಡಾ| ಮಡಿವಾಳರ, ಡಾ| ಪಿ.ಎಸ್.ಜೆಟ್ಟಣ್ಣವರ, ಜಿಲ್ಲೆಯ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ|ಎಸ್.ಎಸ್. ಪಾಟೀಲ, ಡಾ|ತಿಪ್ಪಣ್ಣ ಎಸ್. ತಳಕಲ್ಲ, ಡಾ| ನಿಂಗಪ್ಪ.ಓಲೆಕಾರ, ಡಾ| ಎಚ್.ಬಿ. ಹುಲಗಣ್ಣವರ, ಡಾ| ಎಸ್.ವಿ.ತಿಗರಿಮಠ, ಡಾ| ಎಸ್.ಎಸ್.ಹೊಸಮಠ ಉಪಸ್ಥಿತರಿದ್ದರು.