ಗದಗ: ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳ ಪಾತ್ರದ ಜನರು ಪ್ರತಿವರ್ಷ ಪ್ರವಾಹಕ್ಕೆ ಸಿಲುಕುತ್ತಿದ್ದು, ಜಿಲ್ಲೆಯ ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಅಧಿಕಾರಿಗಳು ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು.
ನಗರದ ಜಿಪಂ ವಿಡಿಯೋ ಕಾನ್ಫೆರೆನ್ಸ್ ಮೂಲಕ ಜಿಲ್ಲೆಯ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿ ವರ್ಷ ಪ್ರವಾಹಕ್ಕೆ ಒಳಗಾಗುವ ಗ್ರಾಮಗಳನ್ನು ಗುರುತಿಸಿ, ಶಾಶ್ವತ ಪರಿಹಾರ ಕಲ್ಪಿಸುವುದರ ಜೊತೆಗೆ ನಷ್ಟವನ್ನು ತಪ್ಪಿಸಲು ಅಗತ್ಯದ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಹದಿಂದ ಮುಳುಗಡೆಯಾಗಿರುವ ರೈತರ ಕೃಷಿ ಹಾಗೂ ತೋಟಗಾರಿಕೆ ಜಮೀನುಗಳ ಬೆಳೆಹಾನಿ ಕುರಿತು ಜಂಟಿ ಸಮೀಕ್ಷಾ ಕಾರ್ಯ ನಡೆಯುತ್ತಿದೆ. ತಹಶೀಲ್ದಾರ್‌ರು ಸಮೀಕ್ಷೆಯಲ್ಲಿ ಭಾಗವಹಿಸಿ, ನಿಖರವಾದ ವರದಿ ನೀಡಬೇಕು. ಪ್ರಸಕ್ತ ಸಾಲಿನ ಬೆಳೆ ಸಮೀಕ್ಷಾ ಕಾರ್ಯ ಕೈಗೊಳ್ಳಲು ರೈತರಿಗೆ ಮೊಬೈಲ್ ಆ್ಯಪ್ ಮೂಲಕ ಅವಕಾಶ ಒದಗಿಸಲಾಗಿದ್ದು, ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಿ. ಯಾವುದೇ ರೈತ ಬೆಳೆ ಸಮೀಕ್ಷೆಯಿಂದ ವಂಚಿತರಾಗದಂತೆ ಕ್ರಮಕೈಗೊಳ್ಳಲು ಕೃಷಿ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸುವವರ ಹಾಗೂ ಅನ ಧಿಕೃತವಾಗಿ ದಾಸ್ತಾನು ಮಾಡುವವರ ಮೇಲೆ ನಿಗಾವಹಿಸಿ, ರಸಗೊಬ್ಬರ ಹಂಚಿಕೆ ಸಂದರ್ಭದಲ್ಲಿ ನೂಕು ನೂಗ್ಗಲುಗಳಿಗೆ ಆಸ್ಪದ ನೀಡದಂತೆ ಕ್ರಮ ವಹಿಸಬೇಕು. ಕೃತಕ ಅಭಾವ ಹಾಗೂ ಅನ ಧಿಕೃತ ದಾಸ್ತಾನು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತಿಳಿಸಿದರು. ಜಿಪಂ ಸಿಇಒ ಡಾ| ಆನಂದ್ ಕೆ. ಮಾತನಾಡಿ, ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರಿಗೆ ನಿಯಮಾನುಸಾರ ಚಿಕಿತ್ಸೆ ನೀಡಿ, ಗುಣಮುಖರಾದ ತಕ್ಷಣ ಬಿಡುಗಡೆ ಮಾಡಬೇಕು. ಅಲ್ಲದೇ, ಆರೈಕೆ ಕೇಂದ್ರಗಳಲ್ಲಿ ಸೋಂಕಿತರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂದರು. ಅಪರ ಜಿಲ್ಲಾಧಿಕಾರಿ ಸತೀಶ್‌ಕುಮಾರ್ ಎಂ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಎಸ್.ಎನ್. ರುದ್ರೇಶ್, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸತೀಶ ಬಸರಿಗಿಡದ ಇದ್ದರು.