ಗದಗ: ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಸಾಕಷ್ಟು ನಷ್ಟವಾಗಿದೆ. ರೈತರು ಬೆಳೆದ ಸಾವಿರಾರೂ ಹೆಕ್ಟೇರ್ ಬೆಳೆ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ರೈತರಿಗೆ ಬೆಳೆ ಪರಿಹಾರದೊಂದಿಗೆ ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಬೇಕು ಎಂದು ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಹೋರಾಟ ಸಮಿತಿ ಒತ್ತಾಯಿಸಿದೆ.
ಈ ಕುರಿತು ಸಂಘಟನೆ ರಾಜ್ಯಾಧ್ಯಕ್ಷ ಎಸ್.ಎಸ್. ರಡ್ಡೇರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಇತ್ತೀಚೆಗೆ ಉಂಟಾದ ಪ್ರವಾಹದಿಂದ ಸಾಕಷ್ಟು ಮನೆಗಳು ಕೊಚ್ಚಿ ಹೋಗಿದ್ದು, ಲಕ್ಷಾಂತರ ಜನರ ಬದುಕು ಬೀದಿಗೆ ಬಂದಿದೆ. ಅವರ ವಾಸಕ್ಕಾಗಿ ತಾತ್ಕಾಲಿಕ ಶೆಡ್ ನಿರ್ಮಿಸುವುದರೊಂದಿಗೆ ಶಾಶ್ವತ ಮನೆ ಕಲ್ಪಿಸಬೇಕು. ಜೊತೆಗೆ ಸಂತ್ರಸ್ತ ಕುಟುಂಬದ ಓರ್ವ ಸದಸ್ಯರಿಗೆ ಸರಕಾರಿ ಉದ್ಯೋಗ ಒದಗಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಎಸ್.ಎನ್. ಪಾಟೀಲ್ ಮಾತನಾಡಿ, ನೆರೆ ಹಾವಳಿಗೆ ತುತ್ತಾದ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳ ಭಯ ಶುರುವಾಗಿದೆ. ನೆರೆ ಪೀಡಿತ ಗ್ರಾಮಗಳಲ್ಲಿ ಸ್ವಚ್ಛತೆಯೊಂದಿಗೆ ವೈದ್ಯಕೀಯ ಸೇವೆ ಚುರುಕುಗೊಳಿಸಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ಕಾರ್ಯಕರ್ತ ನಿಸಾರ್ ಅಹ್ಮದ್ ಮಾತನಾಡಿ, ನೆರೆಯಿಂದ ಮನೆ ಕಳೆದುಕೊಂಡವರು ಸದ್ಯಕ್ಕೆ ನೆರೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ, ತಿಂಗಳು ಕಳೆದರೂ ತಾತ್ಕಾಲಿಕ ಶೆಡ್ ದೊರೆಯದೇ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಈ ಕುರಿತು ಸರಕಾರ ತಕ್ಷಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಂಚಾಲಕ ರಾಜಶೇಖರ ಕಾತರಕಿ, ರಾಜ್ಯ ರೈತ ಘಟಕದ ಬಸವರಾಜ ಉಪನಾಳ, ಅಲ್ಪಸಂಖ್ಯಾತರ ಘಟಕ ರಾಜ್ಯಾಧ್ಯಕ್ಷ ಎಂ.ಪಿ. ಮುಳಗುಂದ, ಜಿಲ್ಲಾಧ್ಯಕ್ಷ ಎಂ.ಎಸ್. ರಡ್ಡೇರ, ಅಕ್ಬರಬೇಗ, ಎಸ್.ಸಿ., ಎಸ್.ಟಿ. ಅಧ್ಯಕ್ಷ ಲಕ್ಷ್ಮಣ ಹಳ್ಳಿಕೇರಿ, ಗುರುಸಿದ್ಧಯ್ಯ ಹಳ್ಳಿಕೇರಿಮಠ, ಮಲ್ಲಯ್ಯ ಮುಧೋಳಮಠ, ಕೆ.ಎಚ್. ಗದ್ವಾಲ, ಹಜರಾತಸಾಬ ಮುಳಗುಂದ, ಗಂಗಾಧರ ಗಂಗಾವತಿ, ಹುಸೇನಬಾಬ ಬಾವಿಕಟ್ಟಿ, ಶಿವಾನಂದ ಶಿವಪುರ, ಬಸವರಾಜ ಬಳ್ಳಾರಿ, ಮುಕ್ತುಮ ಶಿರೋಳ ಇದ್ದರು.