ಹಾಸನ: ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಿವೇಶನ ರಹಿತರನ್ನು ಗುರುತಿಸಿ ವಸತಿ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖಾ ಅಧಿಕಾರಿಗಳ ಸಭೆ ನಡೆಸಿದ ಅವರು ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಗುರುತಿಸಲಾಗಿರುವ ಸರ್ಕಾರಿ ಜಮೀನನ್ನು ವಸತಿ ಯೋಜನೆಗಳಿಗೆ ಕಾಯ್ದಿರಿಸಿ ಮಂಜೂರು ನಿವೇಶನ ಮಂಜೂರು ಮಾಡಬೇಕು. ವಸತಿ ಯೋಜನೆಗೆ ಕಾಯ್ದಿರಿಸಿದ ಭೂಮಿ ಒತ್ತಯವರಿಯಾಗಿದ್ದರೆ ಒತ್ತುವರಿ ತೆರವುಗೊಳಿಸಿ ನವೇಶನ ಹಂಚಿಕೆ ಮಾಡಿ ಎಂದ ಅವರು, ನಗರ, ಪಟ್ಟಣ ಪ್ರದೇಶಗಳ ಹೊರವಲಯದ 4-5 ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಗುರುತಿಸಿ ಗುಂಪು ವಸತಿ ಯೋಜನೆ ಜಾರಿಗೊಳಿಸಿ ಎಂದು ಹೇಳಿದರು.
ನೀರಿನ ಯೋಜನೆ ಅನುಷ್ಠಾನಗೊಳಿಸಿ: ಜಿಲ್ಲೆಯಲ್ಲಿ ಜಲಶಕ್ತಿ, ಜಲಾಮೃತ ಹಾಗೂ ನಗರ ಕುಡಿಯುವ ನೀರು ಪೂರೈಕೆ ಯೋಜನೆಗಳನ್ನು ಅತ್ಯಂತ ಆದ್ಯತೆ ಮೇಲೆ ಉತ್ತಮ ಗುಣಮಟ್ಟದೊಂದಿಗೆ ಅನುಷ್ಠಾನಗೊಳಿಸಬೇಕು. ಸ್ವತ್ಛ ಭಾರತ್ ಮಿಷನ್ ಯೋಜನೆಯನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಇನ್ನಷ್ಟು ಉತ್ತಮವಾಗಿ ಜಾರಿಗೊಳಿಸಬೇಕು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಜಾಗ ಮಂಜೂರಾತಿ ಬಾಕಿ ವಿವರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ವಿವಿಧ ಯೋಜನೆಗಳ ಪರಿಶೀಲನೆ: ವಿಪತ್ತು ನಿರ್ವಹಣೆ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಜಲಶಕ್ತಿ ಅಭಿಯಾನ ಮತ್ತು ಜಲಾಮೃತ ಯೋಜನೆಗಳ ಅನುಷ್ಠಾನ, ಗ್ರಾಮೀಣ ಕುಡಿಯುವ ನೀರಿನ ಕಾಮಗಾರಿಗಳು, ಸ್ವತ್ಛಭಾರತ್ ಮಿಷನ್, ನಗರಾಭಿವೃದ್ಧಿ ಯೋಜನೆಗಳು, ವಸತಿ ಯೋಜನೆಗಳ ಪ್ರಗತಿ, ಕಂದಾಯ ವಿಷಯಗಳು, ಭೂ ಒಡೆತನ ಯೋಜನೆ, ಪ್ರಗತಿ ಕಾಲೋನಿ ಯೋಜನೆ, ಅಲ್ಪ ಸಂಖ್ಯಾತರ ಕಲ್ಯಾಣ, ಬೆಳೆ ಸಮೀಕ್ಷೆ, ಮಾತೃವಂದನಾ ಮತ್ತು ಮಾತೃಶ್ರೀ, ಜನನಿ ಸುರಕ್ಷಾ ಯೋಜನೆ, ಸಂಸದರ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ, ಯೋಜನೆ, ಸಕಾಲ ಮತ್ತು ಇ-ಆಫೀಸ್ ಕುರಿತಂತೆ ಜಿಲ್ಲಾಧಿಕಾರಿಯವರು ಪರಿಶೀಲನೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿಹಣಾಧಿಕಾರಿ ಪರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈಗಾಗಲೇ 1,400 ಎಕರೆ ಸರ್ಕಾರಿ ಜಾಗ ಗುರುತಿಸಲಾಗಿದೆ. ಆದರೆ ಅದರ ಒತ್ತುವರಿ ತೆರವುಗೊಳಿಸಿ ವಸತಿ ಯೋಜನೆಗೆ ಕಾಯ್ದಿರಿಸಿ ಕೊಡಬೇಕಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಉಪಭಾಗಾಧಿಕಾರಿಗಳಾದ ಡಾ.ನವೀನ್ ಭಟ್ ಮತ್ತು ಗಿರೀಶ್ ನಂದನ್, ಜಿಪಂ ಉಪ ಕಾರ್ಯದರ್ಶಿ ಮಹೇಶ್, ಮುಖ್ಯ ಯೋಜನಾಧಿಕಾರಿ ನಾಗರಾಜ್, ಡಿಎಚ್‌ಒ ಡಾ.ಸತೀಶ್ ಕುಮಾರ್, ಕಾರ್ಯಪಾಲಕ ಎಂಜಿನಿಯರ್ ಆನಂದ್ ಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ.ಜಗದೀಶ್, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ರೈತರಿಗೆ ಬೆಳೆ ಪರಿಹಾರ ವಿತರಿಸಲು ಸೂಚನೆ
ಹಾಸನ: ಮುಂಗಾರು ಹಾಗೂ ಹಿಂಗಾರಿನಿಂದ ಹಾನಿಗೊಳಗಾಗಿರುವ ಬೆಳೆಗಳಿಗೆ ಪರಿಹಾರವನ್ನು ತ್ವರತವಾಗಿ ವಿತರಣೆ ಮಾಡಬೇಕೆಂದು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಒಂದು ವಾರದೊಳಗೆ ಬಾಕಿ ಇರುವ ಫಲಾನುಭವಿಗಳಿಗೆ ಪರಿಹಾರ ಬಿಡುಗಡೆ ಮಾಡಿ, ವರದಿ ನೀಡಬೇಕು ಎಂದು ತಾಕೀತು ಮಾಡಿದರು.
ವಿಡಿಯೋ ಸಂವಾದದ ನಂತರ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ ಮಾನವೀಯ ದೃಷ್ಟಿಯಿಂದ ಕೆಲಸ ನಿರ್ವಹಣೆ ಮಾಡಬೇಕು ಎಂದು ಹೇಳಿದರು. 2020-21 ಸಾಲಿನಲ್ಲಿ ನಡೆಯಲಿರುವ ಜನಗಣತಿಗೆ ಸಂಬಂಧಿಸಿದ ಪೂರ್ವ ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಪಂ ಸಿಇಒ ಪರಮೇಶ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.