Advertisement

24 ಗಂಟೆಯಲ್ಲಿ ಮನೆ ಹಾನಿ ಪರಿಹಾರ ಕೊಡಿ

02:38 PM Aug 11, 2022 | Team Udayavani |

ಬೆಳಗಾವಿ: ಅತಿವೃಷ್ಟಿಯಿಂದ ಮನೆಹಾನಿ ಅಥವಾ ಮನೆಗಳಿಗೆ ನೀರು ನುಗ್ಗಿದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳಿಗೆ 24 ಗಂಟೆಗಳಲ್ಲಿ ಪರಿಹಾರ ನೀಡಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಸೂಚನೆ ನೀಡಿದರು.

Advertisement

ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಹಾಗೂ ಕೈಗೊಳ್ಳಲಾದ ಪರಿಹಾರ ಕ್ರಮಗಳ ಕುರಿತು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶೀಲನಾ ಸಭೆ ನಡೆಸಿದ ಅವರು, ಯಾವುದೇ ಕುಟುಂಬಗಳು 2019 ರ ನಂತರ ಮನೆ ಬಿಟ್ಟು ಬೇರೆ ಕಡೆ ಇದ್ದಾಗಲೂ ಅಂತಹ ಖಾಲಿ ಮನೆಗಳು ಬಿದ್ದರೂ ಸಹ ಈ ಕುಟುಂಬಗಳಿಗೂ ಮನೆಹಾನಿ ಪರಿಹಾರವನ್ನು ಬಿಡುಗಡೆಗೊಳಿಸಬೇಕು ಎಂದರು. ನಗರದಲ್ಲಿ ಪ್ರತಿ ವರ್ಷ ಸಮಸ್ಯೆ ಉಂಟುಮಾಡುತ್ತಿರುವ ಬಳ್ಳಾರಿ ನಾಲಾ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಳ್ಳಾರಿ ನಾಲಾ ನಿರ್ವಹಣೆಯನ್ನು ಪಾಲಿಕೆಯು ಮಾಡಬೇಕು. ಈ ನಾಲಾದ ಉಳಿದ ಕಡೆಗಳಲ್ಲಿ ನೀರಾವರಿ ಇಲಾಖೆಯ ವತಿಯಿಂದ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 35 ಕಿ.ಮೀ. ಬಳ್ಳಾರಿ ನಾಲಾ ಹರಿವು ಇದೆ. ಅದನ್ನು ನಿರ್ವಹಿಸಲು ಪಾಲಿಕೆಯು ಕ್ರಮ ಕೈಗೊಳ್ಳಬೇಕು. ನಾಲಾ ಅಕ್ಕಪಕ್ಕದ ಮನೆಗಳಿಗೆ ಹಾಗೂ ಬೆಳೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದ ಸಚಿವರು, ನಾಲಾ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಅನುಕೂಲವಾಗುವಂತೆ ಸಮಗ್ರ ಯೋಜನಾ ವರದಿ(ಡಿಪಿಆರ್‌) ರೂಪಿಸಬೇಕು. ನಾಲಾ ವ್ಯಾಪ್ತಿಯ ರೈತರನ್ನು ಭೇಟಿ ಮಾಡಿ ಅವರ ಮನವೊಲಿಸುವ ಮೂಲಕ ಬದುಗಳಲ್ಲಿ ನಿಲ್ಲುವ ನೀರು ನಾಲಾಕ್ಕೆ ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದರು.

255 ಕೋಟಿ ಹಾನಿ: ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಒಟ್ಟಾರೆ 255 ಕೋಟಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಎನ್‌.ಡಿ.ಆರ್‌.ಎಫ್‌. ಮಾರ್ಗಸೂಚಿ ಪ್ರಕಾರ ಹಾನಿಯ ಕುರಿತು ಪ್ರಸ್ತಾವನೆಯನ್ನು ಸರಕಾರಕ್ಕೆ ಕಳಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ವ್ಯಾಪಕ ಮಳೆಯಿಂದ ಜಿಲ್ಲೆಯ ಕೆಲವು ಕಡೆಗಳಲ್ಲಿ ಬೆಳೆಹಾನಿಯಾಗಿದೆ. ಹೊಲದಲ್ಲಿ ನೀರು ನಿಂತಿರುವುದರಿಂದ ಬೆಳೆ ಹಾನಿ ಸಮೀಕ್ಷೆ ನಡೆಸಲು ಆಗುತ್ತಿಲ್ಲ. ಮಳೆ ಕಡಿಮೆಯಾದ ನಂತರ ಆದಷ್ಟು ಬೇಗ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಜಲಜೀವನ ಮಿಷನ್‌ ಕಾಮಗಾರಿ ಪೂರ್ಣಗೊಳ್ಳುವವರೆಗೆ ಕುಟುಂಬಗಳು ಹೊಂದಿರುವ ಹಳೆಯ ನಳಗಳ ಸಂಪರ್ಕವನ್ನು ಮುಂದುವರಿಸಬೇಕು. ಜಲಜೀವನ ಮಿಷನ್‌ ಯೋಜನೆ ಸಂಪೂರ್ಣ ಅನುಷ್ಠಾನಗೊಂಡ ಬಳಿಕವೇ ಹಳೆಯ ಸಂಪರ್ಕ ತೆರವುಗೊಳಿಸಬೇಕು ಎಂದು ಸಚಿವರು ಹೇಳಿದರು.

ಆಕ್ಸಿಜನ್‌ ಸೌಲಭ್ಯ: ಕೋವಿಡ್‌ ಸಂದರ್ಭದಲ್ಲಿ ಆಕ್ಸಿಜನ್‌ ಸೌಲಭ್ಯದ ಹಾಸಿಗೆಗಳು, ಆಕ್ಸಿಜನ್‌ ಘಟಕ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಈ ಸೌಲಭ್ಯಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಬೇಕು. ಸರಕಾರಿ ಆಸ್ಪತ್ರೆಗಳಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿರುವ ಸೌಲಭ್ಯಗಳ ಬಗ್ಗೆಯೂ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಬೇಕು. ಅಗತ್ಯ ಔಷಧೋಪಕರಣಗಳ ಸಂಗ್ರಹ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಹರ್‌ ಘರ್‌ ತಿರಂಗಾ: ಆಗಸ್ಟ್‌ 12 ರಿಂದ 15 ರವರೆಗೆ ದೇಶದಾದ್ಯಂತ ಹಮ್ಮಿಕೊಳ್ಳಲಾಗಿರುವ ಹರ್‌ ಘರ್‌ ತಿರಂಗಾ ಅಭಿಯಾನವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಹತ್ತು ಲಕ್ಷಕ್ಕೂ ಅಧಿಕ ಮನೆಗಳಿದ್ದು, ಬಹುತೇಕ ಮನೆಗಳ ಮೇಲೆ ನಾಗರಿಕರು ಸ್ವಯಂಪ್ರೇರಣೆಯಿಂದ ಧ್ವಜಾರೋಹಣ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಲ್ಲ ಸಹಕಾರ ನೀಡಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಜಿಲ್ಲೆಯಲ್ಲಿ ಹತ್ತು ಲಕ್ಷಕ್ಕೂ ಅಧಿಕ ಮನೆಗಳಿದ್ದು, ಶೇ.75 ರಷ್ಟು ಮನೆಗಳಿಗೆ ಧ್ವಜಗಳನ್ನು ಪೂರೈಸುವ ಗುರಿ ಹೊಂದಲಾಗಿದೆ. ಅದರ ಪ್ರಕಾರ ಒಟ್ಟಾರೆ 7.50 ಲಕ್ಷ ಧ್ವಜಗಳ ವಿತರಣೆಗೆ ಕ್ರಮ ವಹಿಸಲಾಗಿದೆ. ಜಿಲ್ಲೆಗೆ 4.83 ಧ್ವಜಗಳು ಬಂದಿದ್ದು ಅದರಲ್ಲಿ 3.50 ಲಕ್ಷಕ್ಕೂ ಹೆಚ್ಚು ಧ್ವಜಗಳನ್ನು ಇದುವರೆಗೆ ವಿತರಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಬೆಳಗಾವಿ ಪೊಲೀಸ್‌ ಆಯುಕ್ತರಾದ ಡಾ| ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ್‌ ಪಾಟೀಲ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪಾಲಿಕೆ ಆಯುಕ್ತ ಡಾ.ರುದ್ರೇಶ್‌ ಘಾಳಿ, ಉಪ ವಿಭಾಗಾಧಿಕಾರಿಗಳಾದ ರವೀಂದ್ರ ಕರಲಿಂಗಣ್ಣವರ, ಸಂತೋಷ ಕಾಮಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್‌ ಕೋಣಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next