Advertisement

ಬಲಿಜ ಸಮುದಾಯಕ್ಕೆ ಕೂಡಲೇ ಪೂರ್ಣ ಪ್ರಮಾಣದ 2ಎ ಮೀಸಲಾತಿ ಸೌಲಭ್ಯ ಕಲ್ಪಿಸಿ : ಮಾಜಿ ಸಚಿವ ಎಂ.ಆರ್. ಸೀತಾರಾಂ

05:56 PM Jan 27, 2023 | Team Udayavani |

ಬೆಂಗಳೂರು; ಬಲಿಜ ಸಮುದಾಯಕ್ಕೆ ರಾಜ್ಯ ಸರ್ಕಾರ ಕೂಡಲೇ ಪೂರ್ಣ ಪ್ರಮಾಣದಲ್ಲಿ 2ಎ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂದು ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎಂ.ಆರ್. ಸೀತಾರಾಂ ಒತ್ತಾಯಿಸಿದ್ದಾರೆ.

Advertisement

ನಗರದ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿದ್ದ ಬೃಹತ್ “ಬಲಿಜ ಸಂಕಲ್ಪ ಸಭೆ”ಯಲ್ಲಿ ಬಲಿಜ ಸಮುದಾಯದ ಹಕ್ಕೊತ್ತಾಯಗಳನ್ನು ಬೆಂಬಲಿಸಿ ಮಾತನಾಡಿದ ಅವರು, ಬಲಿಜ ಸಮುದಾಯಕ್ಕೆ 2ಎ ಪ್ರವರ್ಗದಡಿ ಶಿಕ್ಷಣದಲ್ಲಿ ಮಾತ್ರ ಮೀಸಲಾತಿ ಸೌಲಭ್ಯವಿದ್ದು, ಸರ್ಕಾರಿ ನೇಮಕಾತಿ ಸೇರಿ ಪೂರ್ಣಪ್ರಮಾಣದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಸಮುದಾಯದ ಮನವಿಯನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಮೀಸಲಾತಿ ಸೌಲಭ್ಯ ಪಡೆಯಲು ಬಲಿಜ ಜನಾಂಗ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು. ನಮ್ಮಲ್ಲಿ ಏಕತೆ ಇಲ್ಲದಿದ್ದರೆ ಹೋರಾಟ ತನ್ನ ಗುರಿ ಮುಟ್ಟುವುದಿಲ್ಲ. ಪ್ರತಿಯೊಬ್ಬರೂ ಸಹ ಹೋರಾಟದಲ್ಲಿ ಕೈಜೋಡಿಸಬೇಕು ಎಂದರು.

ಬಲಿಜ ಜನಾಂಗ ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆ ಹೊಂದಿದೆ. 1953 ರಿಂದ 1994 ರ ವರೆಗೆ ಸಮುದಾಯ ಹಿಂದುಳಿದ ವರ್ಗದಲ್ಲಿತ್ತು. ಆದರೆ 1994 ರ ಸೆಪ್ಟೆಂಬರ್ ನಲ್ಲಿ ಯಾವುದೇ ಆಯೋಗದ ಶಿಫಾರಸ್ಸುಗಳಿಲ್ಲದೇ ಪ್ರವರ್ಗ 2ಎ ನಿಂದ ಪ್ರವರ್ಗ 3ಬಿ ಗೆ ಸ್ಥಳಾಂತರಿಸಲಾಗಿತ್ತು. 2011 ರಲ್ಲಿ ಬಲಿಜ ಜನಾಂಗಕ್ಕೆ ಶೈಕ್ಷಣಿಕ ಮೀಸಲಾತಿ ಮಾತ್ರ ಕಲ್ಪಿಸಲಾಗಿತ್ತು. ಆದರೆ 29 ವರ್ಷಗಳಿಂದ ಸರ್ಕಾರಿ ನೇಮಕಾತಿ ಮತ್ತಿತರ ಸೌಲಭ್ಯಗಳಿಂದ ಸಮುದಾಯ ವಂಚಿತವಾಗಿದೆ ಎಂದು ಎಂ.ಆರ್. ಸೀತಾರಾಂ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವರಾದ ದಿನೇಶ್ ಗುಂಡೂರಾವ್, ಕೆ.ಆರ್. ರಮೇಶ್ ಕುಮಾರ್ ಅವರು ಸಹ ಬಲಿಜ ಸಮುದಾಯಗಳ ಬೇಡಿಕೆಗಳಿಗೆ ಧ್ವನಿಯಾದರು.

Advertisement

ಬಲಿಜ ಸಂಕಲ್ಪ ಸಭೆಯಲ್ಲಿ ಎಂ.ಎಸ್. ರಾಮಯ್ಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಆರ್. ಜಯರಾಂ, ಬಲಿಜ ಜನಾಂಗ ಪ್ರಮುಖರು ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next