ಬಾದಾಮಿ: ಬಡಮಕ್ಕಳಿಗೆ ದೊರೆಯುವ ಯೋಜನೆ ಜಾರಿಗೊಳಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯ ಹೇಳಿದರು.
ಮಂಗಳವಾರ ಪಟ್ಟಣದ ಹೇಮರೆಡ್ಡಿ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ 2019- 20ನೇ ಸಾಲಿಗೆ ಪ್ರವೇಶ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಿ ಅವರು ಮಾತನಾಡಿದರು. ಈ ಹಿಂದೆ ಗ್ರಾಮೀಣ ಪ್ರದೇಶದ ಎಲ್ಲ ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡಲು ಕಾಯ್ದೆ ಜಾರಿಗೊಳಿಸಿದ್ದೆ. ಆದರೆ, ಮುಂದಿನ ಸರಕಾರ ಅದನ್ನು ರದ್ದುಗೊಳಿಸಿತು ಎಂದರು.
ಇಂದಿನ ಮಕ್ಕಳೆ ದೇಶದ ಮುಂದಿನ ಸಂಪತ್ತು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ-ಸಹಕಾರ ನೀಡಬೇಕು. ಸರಕಾರಿ ಕಾಲೇಜಿನಲ್ಲಿ ಬಡಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ಅಂತವರಿಗೆ ಲ್ಯಾಪ್‌ಟಾಪ್ ಖರೀದಿ ಮಾಡಿ ಓದಲು ಸಾಧ್ಯವಾಗುವುದಿಲ್ಲ. ಈ ಯೋಜನೆಯನ್ನು ನಮ್ಮ ಸರಕಾರ ಜಾರಿ ಮಾಡಿತ್ತು. ಈ ಯೋಜನೆಗೆ 300 ಕೋಟಿ ರೂ. ಸರಕಾರಕ್ಕೆ ಹೊಣೆಯಾದರೂ ಮಕ್ಕಳ ಉನ್ನತ ಶಿಕ್ಷಣ ಮತ್ತು ಹೆಚ್ಚಿನ ವ್ಯಾಸಂಗ ಮಾಡಲು ಒಳ್ಳೆಯದಾಗಿದೆ ಎಂದರು.
ವಿದ್ಯಾರ್ಥಿಗಳ ಉತ್ತಮ ಶಿಕ್ಷಣಕ್ಕಾಗಿ ಬೋಧಕ ಸಿಬ್ಬಂದಿ ಅಧ್ಯಯನ ಮಾಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಇಂದಿನ ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿ ಬರುವಂತಹ ನೀತಿ ಪಾಠ ಬೋಧಿಸುವುದರ ಜತೆಗೆ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಒಳ್ಳೆಯ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು. ಬದುಕಿನಲ್ಲಿ ವಿದ್ಯಾರ್ಥಿ ಜೀವನ ಮಹತ್ವದ್ದಾಗಿದ್ದು, ಶ್ರದ್ಧೆಯಿಂದ ಶ್ರಮ ಪಟ್ಟು ಅಧ್ಯಯನ ಮಾಡಿ ಉಜ್ವಲ ಭವಿಷ್ಯ ಚೆನ್ನಾಗಿರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರು ಕಾಲೇಜಿಗೆ ಸುಸಜ್ಜಿತ ಕಟ್ಟಡ ಸೇರಿದಂತೆ ಇತರೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.ಪ್ರಥಮ ವರ್ಷ ಪ್ರವೇಶ ಪಡೆದ ಬಿಎ ಮತ್ತು ಬಿಕಾಂ 190 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.
ವೇದಿಕೆಯಲ್ಲಿ ಮಾಜಿ ಸಚಿವರಾದ ಪ್ರಮೋದ ಮಧ್ವರಾಜ, ಬಿ.ಬಿ ಚಿಮ್ಮನಕಟ್ಟಿ, ಎಚ್.ವೈ. ಮೇಟಿ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಎಸ್. ಆರ್. ಜಾಬನ್ನವರ ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಜಿ.ಜಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕಿ ಕವಿತಾ ಜಂಗವಾಡ ನಿರೂಪಿಸಿದರು. ಎಂ.ಬಿ. ಹಂಗರಗಿ, ಡಾ| ಎಂ.ಎಚ್.ಚಲವಾದಿ,
ಮಹೇಶ ಹೊಸಗೌಡ್ರ, ಪಿ.ಆರ್. ಗೌಡರ, ಹೊಳಬಸು ಶೆಟ್ಟರ, ಆರ್.ಡಿ.ದಳವಾಯಿ, ಶೈಲಾ ಪಾಟೀಲ ಭಾಗವಹಿಸಿದ್ದರು