ಪಿರಿಯಾಪಟ್ಟಣ: ನೆರೆಯಿಂದಾಗಿ ಸಹಸ್ರಾರು ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿದ್ದು, ಇವರ ಸಹಾಯಕ್ಕೆ ಸಾರ್ವಜನಿಕರು ಮುಂದಾಗಬೇಕು ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದರು.
ತಾಲೂಕಿನ ಬೆಟ್ಟದತುಂಗ ವೀರಭದ್ರೇಶ್ವರ ಸ್ವಾಮಿ ಪುನರ್ ಪ್ರತಿಷ್ಠಾಪನಾ ಮಹೋತ್ಸವದ ಸಮಾರೋಪದಲ್ಲಿ ಮಾತನಾಡಿದ ಅವರು, ಮಾನವ ಜಾಗೃತಿ ಹೊಂದದೆ ಮಾಡುತ್ತಿರುವ ಅನೇಕ ಕಾರ್ಯಗಳು ಇಂದು ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿದೆ. ಪ್ರತಿಯೊಬ್ಬರೂ ಪರಿಸರ ಉಳಿಸಿ ಬೆಳಸುವ ಮನೋಭಾವ ಹೊಂದಬೇಕು ಎಂದರು.
ಧಾರ್ಮಿಕತೆಯ ಜೀವನವು ಮಾನವನನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗಿದ್ದು, ಮುಂದಿನ ಪೀಳಿಗೆಗೆ ಇವುಗಳನ್ನು ಕೊಡುಗೆಯಾಗಿ ನೀಡಲು ಸಹಕರಿಸಬೇಕು. ಅರಸು ಸಮುದಾಯವು ಮೈಸೂರು ರಾಜಮನೆತನದ ಜೊತೆ ಉತ್ತಮವಾದ ಒಡನಾಟ ಹೊಂದಿದ್ದು, ಇವರ ಸಂಕಷ್ಟಗಳಿಗೆ ಅರಮನೆಯ ಆಡಳಿತ ಸದಾ ನೆರವಾಗುತ್ತದೆ ಎಂದು ತಿಳಿಸಿದರು.
ಮಾಜಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಮೈಸೂರು ಸಂಸ್ಥಾನದ ಮಹಾರಾಜರು ನಾಡಿನ ಜನತೆಗೆ ಉತ್ತಮ ಯೋಜನೆಗಳನ್ನು ಜಾರಿಗೊಳಿಸಿ ಇಂದಿಗೂ ಕೂಡ ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲಸಿದ್ದಾರೆ. ತಾವು ಶಾಸಕರಾಗಿದ್ದಾಗ ಅರಸು ತವರು ಬೆಟ್ಟದತುಂಗ ಗ್ರಾಮವನ್ನು ದತ್ತು ಪಡೆದು 10 ಕೋಟಿ ರೂ. ಅನುದಾನ ಕೊಡಿಸಿ ಗ್ರಾಮವನ್ನು ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದೇವೆ ಎಂದು ತಿಳಿಸಿದರು.
ಮಳವಳ್ಳಿ ತಾಲೂಕಿನ ಹೊನ್ನೇನಾಯಕನಹಳ್ಳಿ ಮಂಟೇಸ್ವಾಮಿ ಮಠ ಪೀಠಾಧಿಪತಿ ವರ್ಚಸ್ವಿ ಸಿದ್ಧªಲಿಂಗರಾಜೇ ಅರಸ್ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಸಿ ಬಸವರಾಜು, ಮಹೋತ್ಸವ ಸಮಿತಿ ಅಧ್ಯಕ್ಷ, ವಕೀಲ ದೇವರಾಜೇ ಅರಸ್ ತುಂಗ, ಯಜಮಾನರಾದ ಕೃಷೇಅರಸ್ ಇತರರಿದ್ದರು.