Advertisement

ಎಸ್ಸಿ, ಎಸ್ಟಿ ಮೇಲಿನ ದೌರ್ಜನ್ಯ ತಡೆದು ಸೌಲಭ್ಯ ಒದಗಿಸಿ

12:15 PM Jul 13, 2019 | Suhan S |

ಹಾಸನ: ಜಿಲ್ಲೆಯಲ್ಲಿ ಅನುಸೂಚಿತ ಜಾತಿ, ಅನುಸೂಚಿತ ಪಂಗಡದವರ ಮೇಲಿನ ದೌರ್ಜನ್ಯ ಸಂಪೂರ್ಣ ನಿಯಂತ್ರಣದ ಜೊತೆಗೆ ಸರ್ಕಾರದ ಯೋಜನೆಗಳ ಸೌಲಭ್ಯ ವನ್ನು ಸಕಾಲದಲ್ಲಿ ಫ‌ಲಾನುಭವಿಗಳಿಗೆ ತಲುಪಿಸಿ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ, ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಡೀಸಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತು ವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ಕಾಲಕಾಲಕ್ಕೆ ಸಭೆ ನಡೆಸಿ, ಪರಿಶಿಷ್ಟ ಜಾತಿ, ಪಂಗಡದವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಪರಿಶೀಲಿಸ ಬೇಕು. ಜೊತೆಗೆ ಸಮಸ್ಯೆ ಬಗೆಹರಿಸಲು ಎಲ್ಲಾ ಇಲಾಖೆಗಳು ಆದ್ಯತೆ ನೀಡಬೇಕೆಂದರು.

ನಿಗಾವಹಿಸಿ: ಜೀತ ಮುಕ್ತರು, ಪೌರ ಕಾರ್ಮಿಕರಿಗೆ ಮೂಲ ಸೌಲಭ್ಯ ಸಿಗಬೇಕು. ಮುಂದಿನ 15 ದಿನಗಳೊಳಗೆ ಪರಿಶಿಷ್ಟ ಜಾತಿ, ಪಂಗಡವದರು ಸೇರಿ ಪೌರ ಕಾರ್ಮಿಕರಿಗೆ ನಿವೇಶನ ಹಾಗೂ ಸ್ಮಶಾನಕ್ಕೆ ಜಾಗ ತೆರವು ಮಾಡಿಸಿ ಕೊಡಬೇಕು. ಈ ಸಂಬಂಧ ಉಪವಿ ಭಾಗಾಧಿಕಾರಿ ಹಾಗೂ ತಹಶೀಲ್ದಾರರು ಹೆಚ್ಚಿನ ನಿಗಾವಹಿಸಬೇಕೆಂದರು.

ಎಲ್ಲಾ ತಾಲೂಕುಗಳಲ್ಲಿ ಪ್ರತಿ 15 ದಿನಕ್ಕೊಮ್ಮೆ ಮೊದಲನೇ ಸೋಮವಾರ ಹಾಗೂ ನಾಲ್ಕನೇ ಸೋಮವಾರ ತಹಶೀ ಲ್ದಾರ್‌ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಎಸ್ಸಿ-ಎಸ್ಟಿ ಕುಂದುಕೊರತೆ ಆಲಿಸುವ ಸಭೆ ನಡೆಯಬೇಕು. ಅರಕಲಗೂಡು ತಾಲೂಕು ಕೊಳ್ಳಂಗಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ನಕಲಿ ಅಂಕಪಟ್ಟಿ ಸಲ್ಲಿಸಿ ಕಾರ್ಯಕರ್ತೆಯಾಗಿ ನೇಮಕವಾಗಲು ಪ್ರಯತ್ನಿಸಿದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಹೊಳೆನರಸೀಪುರದಲ್ಲಿ ದಲಿತ ವ್ಯಕ್ತಿ ಯೊಬ್ಬರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಬೇಕು ಎಂದು ಸಭೆಯಲ್ಲಿ ಸಮಿತಿ ಸದಸ್ಯರಾದ ಸೋಮಶೇಖರ್‌, ವಿಜಯ್‌ಕುಮಾರ್‌, ನಾರಾಯಣದಾಸ್‌, ಮರಿ ಜೋಸೆಫ್, ಮಹಾಂತಪ್ಪ ಒತ್ತಾಯಿಸಿದರು.

Advertisement

ವಿವಿಧ ಯೋಜನೆಗಳಲ್ಲಿ ಪ್ರವಾಸಿ ಟ್ಯಾಕ್ಸಿ ಗಳನ್ನು ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ನೀಡಲಾಗಿದೆ. ಆದರೆ, ಅನೇಕ ಬಿಳಿ ಬೋರ್ಡ್‌ ವಾಹನಗಳು ಖಾಸಗಿ ಬಾಡಿಗೆ ಮಾಡುತ್ತಿದ್ದು ಹಳದಿ ಬೋರ್ಡ್‌ ವಾಹನ ಮಾಲಿಕರು ನಷ್ಟ ಅನುಭವಿಸುವಂತಾಗಿದೆ ಎಂದು ಸದಸ್ಯರು ಡೀಸಿ ಗಮನಕ್ಕೆ ತಂದರು.

ಸೂಚನೆ:ಈ ಬಗ್ಗೆ ಸಾರಿಗೆ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಮೂಲಕ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಡೀಸಿ ತಿಳಿಸಿದರು. ಜಿಲ್ಲೆಯ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಸಿಸಿ ಟಿ.ವಿ.ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಹಕ್ಕಿ-ಪಿಕ್ಕಿ ಸಮುದಾಯ ಸಾಮಾಜಿಕ ಸಮಸ್ಯೆ, ಮೂಲಭೂತ ಸೌಕರ್ಯದ ಕೊರತೆ ಎದುರಿಸುತ್ತಿದ್ದು ಬೇಲೂರು ತಾಲೂಕಿನ ಅಂಗಡಿಹಳ್ಳಿಯಲ್ಲಿ ತಮ್ಮ ಸಮು ದಾಯ ದವರಿಗೆ ಸೂಕ್ತ ಜಮೀನು ಒದಗಿಸು ವಂತೆ ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸಿ ಸೂಕ್ತ ನೆರವು ಒದಗಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರು.

ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಉಪವಿಭಾಗಾಧಿಕಾರಿಗಳಾದ ಎಚ್.ಎಲ್.ನಾಗರಾಜ್‌, ಕವಿತಾ, ಹಾಸನ ನಗರಸಭೆ ಆಯುಕ್ತ ಪರಮೇಶ್‌, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ‌ ವೆಂಕಟರಮಣ ರೆಡ್ಡಿ, ಸಮಿತಿ ಸದಸ್ಯರಾದ ಮಹಾಲಿಂಗಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next