ಯಮಕನಮರಡಿ: ಗ್ರಾಮೀಣ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕಾದರೆ ಶಾಲೆಗಳಿಗೆ ಮೂಲ ಸೌಕರ್ಯಗಳು ಬೇಕು. ಇನ್ನಾದರೂ ಸರ್ಕಾರ ಅನುದಾನ ನೀಡಿ ಶಾಲೆಗಳ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಆಶ್ರಯದಲ್ಲಿ ಆಯೋಜಿಸಲಾದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ 24 ಶಾಲೆಗಳಿಗೆ 936 ಡೆಸ್ಕ್ ವಿತರಣೆ ಹಾಗೂ ಪ್ರಗತಿ ಪರಿಶೀಲನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಕಳೆದ 13ವರ್ಷಗಳಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಲಾಗಿದೆ. ಒಂದೇ ಸಾರಿ ಎರಡು ಸಾವಿರ ಡೆಸ್ಕ್ಗಳನ್ನು ವಿತರಿಸಿದ್ದು, ಯಮಕನಮರಡಿ ಕ್ಷೇತ್ರದ ಶೈಕ್ಷಣಿಕ ಕ್ರಾಂತಿಯ ಬುನಾದಿಯಾಗಿದೆ. ಶಾಲೆಗಳ ಸುಧಾರಣೆಗಾಗಿ ಸಂಪರ್ಕಿಸಿದರೆ ಅವುಗಳ ಅಭಿವೃದ್ಧಿªಗೆ ಪ್ರಯತ್ನಿಸಲಾಗುವುದು. ಈಗಾಗಲೇ ಕ್ಷೇತ್ರದ ಎಲ್ಲ ಶಾಲೆಗಳಿಗೆ ವಿಜ್ಞಾನ ಸಾಮಗ್ರಿಗಳು, ಕ್ರೀಡಾ ಸಾಮಗ್ರಿ ಒದಗಿಸಲಾಗಿದ್ದು, ಆಧುನಿಕ ತಂತ್ರಜ್ಞಾನ ಬಳಸಿ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಶಾಸಕರ ಅನುದಾನವನ್ನು ಶಾಲೆಗಳ ಅಭಿವೃದ್ಧಿಗಾಗಿ ಬಳಕೆ ಮಾಡಲಾಗುತ್ತದೆ. ಆದರೆ ಯಾವುದೇ ಸರ್ಕಾರವು ಇನ್ನೂವರೆಗೆ ಶಾಲೆಗಳ ಸುಧಾರಣೆಗಾಗಿ ಅನುದಾನ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ ಇದು ವಿಷಾದನೀಯ ಸಂಗತಿ ಎಂದರು.
ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕ ಸತೀಶ ಜಾರಕಿಹೊಳಿ ಶೈಕ್ಷಣಿಕ ಚಿಂತನೆಯುಳ್ಳ ರಾಜಕಾರಣಿ ಸತೀಶ ಪ್ರತಿಭಾ ಪುರಸ್ಕಾರ ಏರ್ಪಡಿಸುವ ಮೂಲಕ ಅವರು ಸಾಂಸ್ಕೃತಿಕ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಸುಮಾರು ಎರಡೂವರೆ ಕೋಟಿ ಅನುದಾನವನ್ನು ಶಾಸಕರು ಬಿಡುಗಡೆ ಮಾಡಿದ್ದಾರೆ ಎಂದರು.
ಚಿಕ್ಕೋಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ ಮಾತನಾಡಿ, ಮಕ್ಕಳಿಗೆ ಅವಶ್ಯಕತೆಗುಣವಾಗಿ ಮೂಲ ಸೌಕರ್ಯ ಒದಗಿಸಬೇಕಾಗುತ್ತದೆ. ಶಿಕ್ಷಕರು ಶಾಲೆಗಳಲ್ಲಿ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಬೇಕೆಂದರು.
ಸಾನ್ನಿಧ್ಯವನ್ನು ಹುಣಸಿಕೊಳ್ಳಮಠದ ಶ್ರೀರಾಚೋಟಿ ಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಹತ್ತರಗಿ ಜಿಪಂ ಸದಸ್ಯೆ ಫಕೀರವ್ವಾ ಹಂಚಿನಮನಿ, ಮಂಜುನಾಥ ಪಾಟೀಲ, ಹುಕ್ಕೇರಿ ತಾಪಂ ಅಧ್ಯಕ್ಷ ದಸ್ತಗಿರ ಬಸ್ಸಾಪೂರಿ, ಮಣಗುತ್ತಿ ಸದಸ್ಯ ಸುರೇಶ ಬೆಣ್ಣಿ, ದಡ್ಡಿ ತಾಪಂ ಸದಸ್ಯೆ ಫರೀದಾ ಬೇಗಂ ಮುಲ್ಲಾ, ಹತ್ತರಗಿ ಗ್ರಾಪಂ ಅಧ್ಯಕ್ಷ ಮಹಾದೇವ ಪಟೊಳಿ, ಯಮಕನಮರಡಿ ಗ್ರಾಪಂ ಅಧ್ಯಕ್ಷ ಅವಕ್ಕಾ ಮಾದರ ಉಪಸ್ಥಿತರಿದ್ದರು. ಎಸ್.ಡಿ.ನಾಯಿಕ ಕಾರ್ಯಕ್ರಮ ನಿರೂಪಿಸಿದರು. ಜೆ.ಎನ್.ಕಾಮನ್ನವರ ವಂದಿಸಿದರು.