ರಾಣಿಬೆನ್ನೂರ: ಭಾರತೀಯರು ನಿಶ್ಚಿಂತರಾಗಿ ಜೀವನ ನಡೆಸಲು ಕಾರಣರಾದ ಹುತಾತ್ಮ ಯೋಧರು ಮತ್ತು ಮಾಜಿ ಸೈನಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ, ಜನಜಾಗೃತಿ ವೇದಿಕೆ, ಉತ್ತರ ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ರೈತ ಸಂಘ ಹಾಗೂ ಕರವೇ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜನಜಾಗೃತಿ ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ತೆಗ್ಗಿನ ಮಾತನಾಡಿ, ಭಾರತದ ಗಡಿಯಲ್ಲಿ ದಿನದ 24 ಗಂಟೆ ಜೀವದ ಹಂಗು ತೊರೆದು ದೇಶ ರಕ್ಷಣೆ ಮಾಡುತ್ತಿರುವ ಸೈನಿಕರು ಭಾರತೀಯರು ನಿಶ್ಚಿಂತರಾಗಿ ಜೀವನ ನಡೆಸಲು ಕಾರಣರಾಗಿದ್ದಾರೆ. ಹಾಗಾಗಿ, ಯುದ್ಧದಲ್ಲಿ ಹುತಾತ್ಮ ಯೋಧರ ಮತ್ತು ಮಾಜಿ ಸೈನಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಸೈನಿಕರ ಜೀವನೋಪಾಯಕ್ಕೆ ಸರ್ಕಾರ ಭೂಮಿ ನೀಡುತ್ತಿತ್ತು. ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹುತಾತ್ಮ ಯೋಧರ ಮತ್ತು ಮಾಜಿ ಸೈನಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿವೆ. ಅವರ ಪ್ರಾಣ ತ್ಯಾಗದಲ್ಲಿ ಕಿಂಚಿತ್ತಾದರೂ ಕಾಳಜಿ ಇದ್ದಲ್ಲಿ ಸರ್ಕಾರಗಳು ಅವರಿಗೆ ಭೂಮಿ, ಪೆಟ್ರೋಲ್ ಬಂಕ್, ಮದ್ಯದಗಂಡಿ ಪರವಾನಗಿ ನೀಡಬೇಕು. ಅವರ ಉಪ್ಪಿನಲ್ಲಿ ರಾಜಕಾರಣ ಮಾಡುತ್ತಿರುವ ರಾಜಕಾರಣಿಗಳು ಈ ಕುರಿತು ಚಿಂತನೆ ನಡೆಸಬೇಕು. ಇಲ್ಲವಾದಲ್ಲಿಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಇಳಿಯಬೇಕಾಗುವುದು ಎಂದು ಎಚ್ಚರಿಸಿದರು.
ನಂತರ ಉಪಹಶೀಲ್ದಾರ್ ಎಂ.ಎಂ. ಹಾದಿಮನಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡ ಹನುಮಂತಪ್ಪ ಕಬ್ಟಾರ, ಫಕ್ಕೀರಪ್ಪ ಪೂಜಾರ, ಮಂಜುನಾಥ ಗೌಡಶಿವಣ್ಣನವರ, ಬಸವರಾಜ ಸಾವಕ್ಕಳವರ, ಲಕ್ಷ್ಮಪ್ಪ ಬವಿಕಟ್ಟಿ, ಟಿ.ಎ.ಕನ್ನಮ್ಮನವರ,ಚನ್ನಬಸಪ್ಪ ಬಣಕಾರ, ಕುಮಾರ ಮಾವಿನತೋಪ, ತಿಪ್ಪೇಶ ಕನ್ನಮ್ಮನವರ, ಶಿವಾಜಿ ಎಂಟೆತ್ತಿನ, ಶಿವಾಜಿ ಬಳೆಅಂಗಡಿ, ಕಿರಣ ಗುಳೇದ, ಜಗದೀಶ ಕೆರೋಡಿ, ಮಹೇಶ ತೆಗ್ಗಿನ, ಮಹೇಶ ಬಣಕಾರ, ಬಸನಗೌಡ ಆಳ್ವಿ, ಶೇಖಪ್ಪ ಬುರಡಿಕಟ್ಟಿ, ಗಂಗಾಧರ ಬಣಕಾರ,ಸೋಮರಡ್ಡಿ ಹಾದಿಮನಿ ಸೇರಿದಂತೆ ಮತ್ತಿತರರು ಇದ್ದರು.