Advertisement

ಸಮರ್ಪಕ ರಸಗೊಬ್ಬರ-ಬಿತ್ತನೆ ಬೀಜ ಪೂರೈಸಿ

02:04 PM Jun 21, 2022 | Team Udayavani |

ಗುರುಮಠಕಲ್‌: ತಾಲೂಕಿನಲ್ಲಿ ಸಮರ್ಪಕ ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆಗೆ ಸಮಸ್ಯೆಯಾದರೆ ರೈತರೊಂದಿಗೆ ಕೃಷಿ ಇಲಾಖೆ ಕಚೇರಿ ಎದುರು ಧರಣಿ ಕುಳಿತುಕೊಳ್ಳುವೆ ಎಂದು ಶಾಸಕ ನಾಗನಗೌಡ ಕಂದಕೂರ ಕೃಷಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ತ್ತೈಮಾಸಿಕ ಕೆಪಿಡಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮುಂಗಾರು ಮಳೆಯಾಗಿಲ್ಲ. ಇಷ್ಟರಲ್ಲಿ ಮಳೆಯಾದರೆ ರೈತರಿಗೆ ಸಕಾಲಕ್ಕೆ ಬೀಜ ಮತ್ತು ರಸಗೊಬ್ಬರ ದೊರೆಯಬೇಕು ಎಂದು ತಾಕೀತು ಮಾಡಿದರು. ತಾವು ಶಾಸಕರಾದಾಗಿನಿಂದ ಅಂಗನವಾಡಿ ಮತ್ತು ಶಾಲಾ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದರೂ ಇನ್ನು ಶಾಲೆಗಳಿಗೆ ಸಮರ್ಪಕ ಕಟ್ಟಡಗಳಿಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಕೊಠಡಿಗಳ ಅಗತ್ಯತೆಯ ಕುರಿತು ಮೇಲಧಿಕಾರಿಗಳು ಮತ್ತು ಸರ್ಕಾರಕ್ಕೆ ವರದಿ ಸಲ್ಲಿಸುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ಮಕ್ಕಳ ಶಿಕ್ಷಣಕ್ಕೆ ಸಮರ್ಪಕ ಸೌಕರ್ಯ ಒದಗಿಸಬೇಕು. ಈ ನಿಟ್ಟಿನಲ್ಲಿ ಶೀಘ್ರವೇ ಉಳಿದ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು ಎಂದು ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡಿದರು.

ಗುರುಮಠಕಲ್‌ ಪಟ್ಟಣದ ಸಮುದಾಯ ಅಸ್ಪತ್ರೆಯಲ್ಲಿ ಆಂಬ್ಯುಲೆನ್ಸ್‌ ಇಲ್ಲದಿರುವುದು ಸಾಕಷ್ಟು ತೊಂದರೆಯಾಗಿದೆ. ಅಪಘಾತದಲ್ಲಿ ಆಂಬ್ಯುಲೆನ್ಸ್‌ ಸಕಾಲಕ್ಕೆ ಇಲ್ಲದೇ ವ್ಯಕ್ತಿ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಕೆಡಿಪಿ ಸದಸ್ಯ ವಿಜಯ ಮಗದಂಪುರ ಸಭೆಯ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಡಾ| ಹನುಮಂತರೆಡ್ಡಿ ರೋಗಿಯನ್ನು ಸಾಗಿಸುವ ವೇಳೆ ಆಂಬ್ಯುಲೆನ್ಸ್‌ ಕೆಟ್ಟಿದ್ದರಿಂದ ಸಮಸ್ಯೆಯಾಗಿದೆ ಸರಿಪಡಿಸಲಾಗುತ್ತಿದೆ ಎಂದರು. ಶಾಸಕ ಕಂದಕೂರ ಮಾತನಾಡಿ, ತಾಲೂಕು ಕೇಂದ್ರ ಸ್ಥಾನದಲ್ಲಿ ಆಂಬ್ಯುಲೆನ್ಸ್‌ ಕೆಟ್ಟರೆ ಹೇಗೆ? ತಕ್ಷಣ ಸರಿಪಡಿಸುವ ಜವಾಬ್ದಾರಿಯಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ತಾವು 2 ಆಂಬ್ಯುಲೆನ್ಸ್‌ ಒದಗಿಸುವುದಾಗಿ ಹೇಳಿದರು.

Advertisement

ಗುರುಮಠಕಲ್‌ ಆಸ್ಪತ್ರೆಯಲ್ಲಿ ಹಗಲಲ್ಲೇ ವೈದ್ಯರು ಇರಲ್ಲ ಎನ್ನುವ ಸಾಕಷ್ಟು ದೂರುಗಳು ಬರುತ್ತಿದ್ದು, ಅಧಿಕಾರಿಗಳು ಏನು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು. ಸಹಾಯಕ ಕೃಷಿ ನಿರ್ದೇಶಕಿ ಶ್ವೇತಾ ಮಾತನಾಡಿ, ಜೂನ್‌ ತಿಂಗಳಲ್ಲಿ ತಾಲೂಕಿನಲ್ಲಿ 63 ಎಂ.ಎಂ. ಮಳೆಯಾಗಬೇಕಿತ್ತು. ಕೇವಲ 8 ಎಂ.ಎಂ. ಮಳೆಯಾಗಿದ್ದು, ಶೇ. 87ರಷ್ಟು ಕೊರೆತ ಮಳೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

54 ಸಾವಿರ ಹೆಕ್ಟೇರ್‌ ಬಿತ್ತನೆ ಗುರಿಯಿದ್ದು, 11 ಸಾವಿರ ಹೆಕ್ಟೇರ್‌ (ಶೇ.20) ಬಿತ್ತನೆಯಾಗಿದೆ ಎಂದು ವಿವರಿಸಿದರು. ಇದೇ ವೇಳೆ ರಸಗೊಬ್ಬರ ಕೊರೆತಯಾಗದಂತೆ ಕ್ರಮವಹಿಸಲು ಕೃಷಿ ಅಧಿಕಾರಿಗಳಿಗೆ ನಿರ್ದೇಶಿಸಿದರು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ಈ ವೇಳೆ ತಹಶೀಲ್ದಾರ್‌ ಚನ್ನಬಸವ, ಯಾದಗಿರಿ ತಾಪಂ ಇಒ ಬಸವರಾಜ ಶರಭೈ, ಮುಖ್ಯಾಧಿಕಾರಿ ಲಕ್ಷ್ಮೀಬಾಯಿ, ತಾಲೂಕು ವೈದ್ಯಾಧಿಕಾರಿ ಹನುಮಂತರೆಡ್ಡಿ, ಸಿಡಿಪಿಒ ಭೀಮರಾಯ ಕಣ್ಣೂರ, ಬಿಒ ಚಂದ್ರಕಾಂತರೆಡ್ಡಿ, ಕೆಡಿಪಿ ಸದಸ್ಯರು ಮತ್ತು ಅಧಿಕಾರಿಗಳು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next