ನವದೆಹಲಿ: “ನನ್ನ ಮಗ ಕಲಿಕೆಯಲ್ಲಿ ಮತ್ತು ಕರ್ತವ್ಯಗಳಲ್ಲಿ ಯಾವಾಗಲೂ ನಿಷ್ಠ ವ್ಯಕ್ತಿ. ಅವನು ಈ ರೀತಿ ನಮ್ಮನ್ನು ತೊರೆಯುತ್ತಾನೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಆದರೂ ದೇಶಕ್ಕಾಗಿ ತನ್ನ ಪ್ರಾಣವನ್ನು ಅರ್ಪಿಸಿದ್ದಾನೆ ಎಂದು ನನಗೆ ಹೆಮ್ಮೆ ಇದೆ”. ಇದು ಗಾಲ್ವಾನ್ ನಲ್ಲಿ ಚೀನಾ ಯೋಧರ ದಾಳಿಗೆ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು (37) ಅವರ ತಂದೆ ಉಪೇಂದರ್ ಮಾತು.
ನಾವು ಗಡಿಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯ ಸುದ್ದಿಯನ್ನು ದೂರದರ್ಶನದಲ್ಲಿ ನೋಡುತ್ತಿದ್ದೇವು. ಆದರೆ ಸುದ್ದಿಯಲ್ಲಿ ಯಾವುದೇ ಹೆಸರುಗಳನ್ನು ಉಲ್ಲೇಖಿಸದ ಕಾರಣ, ನಮ್ಮ ಮಗ ಹುತಾತ್ಮರಲ್ಲಿ ಒಬ್ಬನೆಂದು ನಾವು ಭಾವಿಸಿರಲಿಲ್ಲ. ಆದರೆ ದೆಹಲಿಯಲ್ಲಿ ನನ್ನ ಸೊಸೆಯಿಂದ ನನಗೆ ಕರೆ ಬಂದಾಗ, ನನ್ನ ಮಗ ಹುತಾತ್ಮನೆಂದು ನಮಗೆ ಅರಿವಾಯಿತು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿ, ತೆಲಂಗಾಣದ ಸೂರ್ಯಪೇಟೆ ಪಟ್ಟಣದಲ್ಲಿ ವಾಸಿಸುತ್ತಿರುವ ಉಪೇಂದರ್ ಅವರು ಮಾಧ‍್ಯಮಕ್ಕೆ ತಿಳಿಸಿದ್ದಾರೆ.
ಕಳೆದ ಹಲವು ತಿಂಗಳಿನಿಂದ ಸಂತೋಷ್ ಬಾಬು ಹೈದರಾಬಾದ್ ಗೆ ವರ್ಗಾವಣೆ ಗೆ ಪ್ರಯತ್ನಿಸುತ್ತಿದ್ದ. ಇದು ಫೆಬ್ರವರಿಯಲ್ಲಿ ಅನುಮೋದನೆಗೊಂಡಿತು. ಅದಾಗಲೇ ಕೇಂದ್ರ ಸರ್ಕಾರ ಲಾಖ್ ಡೌನ್ ಘೋಷಿಸಿದ್ದರಿಂದ ಸೇವೆಯಲ್ಲಿ ಮುಂದುವರೆಯಬೇಕಾಯಿತು. ಮುಂದಿನ ತಿಂಗಳು ಬರುವುದಾಗಿ ಹೇಳಿದ್ದರು ಎಂದು ಸಂಬಂಧಿ ಗಣೇಶ್ ಬಾಬು ಹೇಳಿದರು.
ಸೂರ್ಯಪೇಟೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಪೂರೈಸಿದ ಸಂತೋಷ್ ಬಾಬು, ನಂತರ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಸೈನಿಕ ಶಾಲೆಯೊಂದರಲ್ಲಿ ಪ್ರವೇಶ ಪಡೆದರು, ಇಲ್ಲಿ 12 ನೇ ತರಗತಿವರೆಗೆ ಅಧ್ಯಯನ ಮಾಡಿ ತದನಂತರ, ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಪದವಿ ಕೋರ್ಸ್ ಗೆ ಸೇರಿದರು. ನಂತರ ಡೆಹ್ರಾಡೂನ್‌ನಲ್ಲಿರುವ ಭಾರತೀಯ ಮಿಲಿಟರಿ ಅಕಾಡೆಮಿಗೆ ಸೇರಿದರು 2004 ರಲ್ಲಿ ಅವರನ್ನು ಬಿಹಾರ ರೆಜಿಮೆಂಟ್‌ಗೆ ನಿಯೋಜಿಸಲಾಯಿತು ಮತ್ತು ಅವರ ಮೊದಲ ಪೋಸ್ಟಿಂಗ್ ಜಮ್ಮುವಿನಲ್ಲಿತ್ತು. ಅಂದಿನಿಂದ ಅವರು ಭಾರತದ ವಿವಿಧ ಗಡಿಗಳಲ್ಲಿ ಕೆಲಸ ಮಾಡುತ್ತಿದ್ದರು.