ನವದೆಹಲಿ:“ಇನ್ನು ಮುಂದೆ ಸಂಸತ್ ಭವನದ ಆವರಣದಲ್ಲಿ ಯಾವುದೇ ಪ್ರತಿಭಟನೆ, ಧರಣಿ, ನಿರಶನ ಅಥವಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.’ಇಂಥದ್ದೊಂದು ಹೊಸ ಸುತ್ತೋಲೆಯನ್ನು ರಾಜ್ಯಸಭಾ ಕಾರ್ಯಾಲಯವು ಶುಕ್ರವಾರ ಹೊರಡಿಸಿದೆ.
“ಅಸಂಸದೀಯ’ ಪದಗಳ ಪಟ್ಟಿಯು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿರುವಂತೆಯೇ ಈ ಆದೇಶ ಹೊರಬಿದ್ದಿದ್ದು, ಇದು ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ನಾಂದಿ ಹಾಡಿದೆ.
ಇದೇ 18ರಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅದಕ್ಕೆ 3 ದಿನಗಳ ಬಾಕಿಯಿರುವಂತೆಯೇ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ.ಸಿ.ಮೋದಿ ಅವರು ಈ ಸುತ್ತೋಲೆ ಹೊರಡಿಸಿದ್ದಾರೆ. “ಸಂಸತ್‌ನ ಸದಸ್ಯರು ಯಾವುದೇ ಧರಣಿ, ಪ್ರತಿಭಟನೆ, ನಿರಶನ ಅಥವಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಸತ್ ಭವನದ ಆವರಣವನ್ನು ಬಳಸುವಂತಿಲ್ಲ’ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಈವರೆಗೆ ಸಂಸತ್ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಬೇರೆ ಬೇರೆ ವಿಚಾರಗಳಿಗೆ ಸಂಬಂಧಿಸಿ ಧರಣಿ, ಪ್ರತಿಭಟನೆ ನಡೆಸುತ್ತಿದ್ದವು.
ಕಾಂಗ್ರೆಸ್ ಕಿಡಿ:
ಸುತ್ತೋಲೆ ಹೊರಬೀಳುತ್ತಿದ್ದಂತೆ ಟೀಕಾಪ್ರಹಾರ ಆರಂಭವಾಗಿದೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಮುಖ್ಯ ಸಚೇತಕರಾಗಿರುವ ಜೈರಾಂ ರಮೇಶ್ ಅವರು ಟ್ವೀಟ್ ಮಾಡಿ, “ಧರಣಿ ಮಾಡುವಂತಿಲ್ಲ- ಇದು ವಿಶ್ವಗುರುವಿನ ಹೊಸ ಆದೇಶ’ ಎಂದು ಬರೆದುಕೊಂಡಿದ್ದಾರೆ.