Advertisement

ಗರ್ಭಪಾತ ಹಕ್ಕು ನಿಷೇಧಕ್ಕೆ ವ್ಯಾಪಕ ಖಂಡನೆ: ವಿಶ್ವಸಂಸ್ಥೆ,ವಿಶ್ವ ಆರೋಗ್ಯ ಸಂಸ್ಥೆಯಿಂದ ವಿರೋಧ

10:52 AM Jun 26, 2022 | Team Udayavani |

ವಾಷಿಂಗ್ಟನ್‌: ಅಮೆರಿಕದಲ್ಲಿ ಕಳೆದ 50 ವರ್ಷ ಗಳಿಂದ ಮಹಿಳೆಯರಿಗೆ ಸಾಂವಿಧಾನಿಕ ಹಕ್ಕಾಗಿದ್ದ ಗರ್ಭಪಾತವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ನಿಷೇಧಿಸಿರುವುದಕ್ಕೆ ಹಲವು ವಲಯಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯೂ ಈ ತೀರ್ಪಿಗೆ ವಿರೋಧ ವ್ಯಕ್ತಪಡಿಸಿವೆ. “ಇದು ಮಹಿಳೆಯರ ಮಾನವ ಹಕ್ಕುಗಳ ಮೇಲೆ ದೊಡ್ಡ ಹೊಡೆತ’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ಮುಖ್ಯಸ್ಥರಾಗಿರುವ ಮಿಚೆಲ್‌ ಬ್ಯಾಚೆಲೆಟ್‌ ತಿಳಿಸಿದ್ದಾರೆ.

Advertisement

“ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತವು ಅಂತಾರಾಷ್ಟ್ರೀಯ ಮಾನವಹಕ್ಕುಗಳಲ್ಲಿ ಬಲವಾಗಿ ಬೇರೂರಿದೆ. ದೇಹ ಮತ್ತು ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಮಹಿಳೆಯರಿಗೆ ಹಕ್ಕಿದೆ’ ಎಂದು ಅವರು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯೂ ಈ ಬಗ್ಗೆ ವಿರೋಧ ಹೊರಹಾಕಿದ್ದು, “ಪ್ರತಿವರ್ಷ 2.5 ಕೋಟಿ ಅಸುರಕ್ಷಿತ ಗರ್ಭಪಾತವಾಗುತ್ತದೆ ಮತ್ತು 37,000 ಗರ್ಭಿಣಿಯರು ಸಾವನ್ನಪ್ಪುತ್ತಾರೆ. ಈ ರೀತಿ ಹಕ್ಕು ಹಿಂಪಡೆಯುವುದರಿಂದ ಗರ್ಭಪಾತದ ಸಂಖ್ಯೆ ಕಡಿಮೆಯಾಗುವುದಿಲ್ಲ ಬದಲಾಗಿ ಅಸುರಕ್ಷಿತ ಗರ್ಭಪಾತ ಹೆಚ್ಚುತ್ತದೆ’ ಎಂದು ತಿಳಿಸಿದೆ.

ಮಹಿಳೆಯರಿಗೆ ಕಂಪೆನಿಗಳಿಂದ ವಿಶೇಷ ಸೌಲಭ್ಯ
ಗರ್ಭಪಾತ ಹಕ್ಕು ಹಿಂಪಡೆದು ಅಮೆರಿಕ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದ ಬೆನ್ನಲ್ಲೇ ಅಮೆರಿಕ ಪ್ರತಿಷ್ಠಿತ ಕಂಪೆನಿಗಳು ಮಹಿಳಾ ಸಿಬಂದಿಗೆ ವಿಶೇಷ ಸೌಲಭ್ಯ ಘೋಷಿಸಿವೆ. ಮಹಿಳಾ ಸಿಬಂದಿ, ಗರ್ಭ ಪಾತಕ್ಕೆ ಅನುಮತಿ ಇರುವ ಸ್ಥಳಕ್ಕೆ ತೆರಳಿ ಗರ್ಭಪಾತ ಮಾಡಿಸಿಕೊಂಡು ಬರುವುದಕ್ಕೆ ಪ್ರಯಾಣ ವೆಚ್ಚ ಭರಿಸುವುದಾಗಿ ವಾಲ್ಟ್ ಡಿಸ್ನಿ, ಮೆಟಾ ಪ್ಲಾಟ್‌ಫಾರಂ ಸೇರಿ ಹಲವು ಸಂಸ್ಥೆಗಳು ಘೋಷಿಸಿವೆ.

ಪೀರಿಯಡ್‌ ಟ್ರ್ಯಾಕಿಂಗ್‌ ಆ್ಯಪ್‌ ಡಿಲೀಟ್‌!
ಸುಪ್ರೀಂ ಆದೇಶದ ಬೆನ್ನಲ್ಲೇ ಅಮೆರಿಕದ ಮಹಿಳೆಯರು ಪೀರಿಯಡ್‌ ಟ್ರ್ಯಾಕಿಂಗ್‌ ಆ್ಯಪ್‌ ಗಳನ್ನು ಡಿಲೀಟ್‌ ಮಾಡಲಾರಂಭಿಸಿದ್ದಾರೆ. ಈ ರೀತಿ ಟ್ರ್ಯಾಕಿಂಗ್‌ ಮಾಡುವ ಆ್ಯಪ್‌ಗಳು ತಮ್ಮಲ್ಲಿರುವ ದಾಖಲೆಯನ್ನು ಸರಕಾರದೊಂದಿಗೆ ಹಂಚಿಕೊಳ್ಳುತ್ತವೆ. ಅದರಿಂದಾಗಿ ಗರ್ಭಪಾತದ ವಿಚಾರ ಸರಕಾರಕ್ಕೆ ತಿಳಿಯುವ ಸಾಧ್ಯತೆಯಿದೆ ಎನ್ನಲಾಗಿದ್ದು, ಅದೇ ಕಾರಣಕ್ಕೆ ಮಹಿಳೆಯರು ಆ್ಯಪ್‌ ಗಳನ್ನೇ ಡಿಲೀಟ್‌ ಮಾಡಲಾರಂಭಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next