Advertisement

ಚಳಿಗಾಲ ಅಧಿವೇಶನಕ್ಕೆ ಪ್ರತಿಭಟನೆ ಬಿಸಿ

08:25 AM Dec 19, 2022 | Team Udayavani |

ಬೆಳಗಾವಿ: ಚುಮು ಚುಮು ಚಳಿಯ ಮಧ್ಯೆ ನಡೆಯಲಿರುವ ವಿಧಾನಮಂಡಲ ಚಳಿಗಾಲ ಅಧಿವೇಶನ ವೇಳೆ ಸರ್ಕಾರವನ್ನು ಕಟ್ಟಿ ಹಾಕಲು ಒಂದೆಡೆ ವಿಪಕ್ಷಗಳು ತೊಡೆ ತಟ್ಟಿ ನಿಂತರೆ, ಇನ್ನೊಂದೆಡೆ ವಿವಿಧ ಸಂಘ-ಸಂಸ್ಥೆಗಳು ಸರ್ಕಾರದ ವಿರುದ್ಧ ಅಖಾಡಕ್ಕಿಳಿದು ಪ್ರತಿಭಟನೆ ನಡೆಸಲು ಸಜ್ಜಾಗಿವೆ.

Advertisement

ಪ್ರತಿವರ್ಷ ಸುವರ್ಣ ವಿಧಾನಸೌಧದದಲ್ಲಿ ನಡೆಯುವ ಚಳಿಗಾಲ ಅಧಿ ವೇಶನ ವೇಳೆ ಅತಿ ಹೆಚ್ಚಿನ ಸಂಖ್ಯೆಯ ಪ್ರತಿಭಟನೆ, ಹೋರಾಟ, ಧರಣಿ ಸತ್ಯಾಗ್ರಹಗಳು ನಡೆಯುವುದು ಸಹಜ. ಅದರಂತೆ ಈ ಸಲವೂ ಡಿ.19ರಿಂದ ನಡೆಯಲಿರುವ ಅಧಿ ವೇಶನ ವೇಳೆ 65ಕ್ಕೂ ಹೆಚ್ಚು ವಿವಿಧ ಸಂಘ-ಸಂಸ್ಥೆಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ರಣತಂತ್ರ ಹೆಣೆಯುತ್ತಿವೆ.

ಸದನದ ಒಳಗೆ ವಿಪಕ್ಷಗಳು ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯುತ್ತಿದ್ದರೆ, ಇತ್ತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ. 10 ದಿನಗಳ ಕಾಲ ನಡೆಯುವ ಅಧಿವೇಶನ ವೇಳೆ ಪ್ರತಿಭಟನೆ ನಡೆಸಲು 65ಕ್ಕೂ ಹೆಚ್ಚು ಪ್ರತಿಭಟನೆಗಾಗಿ ಅನುಮತಿ ನೀಡಲಾಗಿದೆ. ರಾಜ್ಯ ಹಾಗೂ ವಿವಿಧ ಜಿಲ್ಲಾ ಮಟ್ಟದ ಸಂಘ-ಸಂಸ್ಥೆಗಳು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಿವೆ. ನೇರವಾಗಿ ಮನವಿ ನೀಡಲು 9 ಅರ್ಜಿಗಳು ಬಂದಿವೆ.

ಎರಡು ಕಡೆ ಪ್ರತಿಭಟನೆಗೆ ಅವಕಾಶ: ಸುವರ್ಣ ವಿಧಾನಸೌಧ ಸುತ್ತಲೂ ಈಗಾಗಲೇ ಪ್ರತಿಭಟನೆಗಾಗಿಯೇ ಟೆಂಟ್‌ಗಳನ್ನು ಹಾಕಲಾಗಿದೆ. ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ಸಂಘ-ಸಂಸ್ಥೆಗಳಿಗೆ ಸಂಖ್ಯೆಯ ಅನುಸಾರವಾಗಿ ಟೆಂಟ್‌ಗಳ ಹಂಚಿಕೆ ಮಾಡಲಾಗಿದೆ. ಪ್ರತಿ ವರ್ಷ ಹಲಗಾದ ಸುವರ್ಣ ಉದ್ಯಾನ ಬಳಿಯ ಕೃಷಿ ಭೂಮಿಯಲ್ಲಿ ಪ್ರತಿಭಟನೆಗೆ ಟೆಂಟ್‌ ಹಾಕಿ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಬೆಳೆ ಬೆಳೆದಿರುವುದರಿಂದ ಈ ಸಲ ಅಲ್ಲಿಯ ರೈತರು ಜಮೀನು ನೀಡಲು ನಿರಾಕರಿಸಿದ್ದಾರೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬಸ್ತವಾಡದಲ್ಲಿರುವ 6 ಎಕರೆ ಜಾಗವನ್ನು ಬಳಸಿಕೊಳ್ಳಲಾಗಿದೆ. ಇಲ್ಲಿ 9 ಸಾವಿರವರೆಗೆ ಪ್ರತಿಭಟನಾಕಾರರು ಸೇರಬಹುದಾಗಿದೆ. ಜತೆಗೆ ಕೊಂಡಸಕೊಪ್ಪ ಗುಡ್ಡದಲ್ಲಿ ಒಂದೂವರೆ ಎಕರೆ ಜಾಗದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿ 5 ಸಾವಿರಕ್ಕೂ ಹೆಚ್ಚು ಜನರಿಗೆ ಅವಕಾಶ ಇದೆ.

ಮಾಡು ಇಲ್ಲವೇ ಮಡಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆಯಲಿರುವ ವಿರಾಟ್‌ ಪಂಚಶಕ್ತಿ ಸಮಾವೇಶ ಸರ್ಕಾರದ ಬುಡಕ್ಕೇ ಕೈ ಹಾಕಲಿದೆ. ಲಕ್ಷ ಲಕ್ಷ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ನಡೆಸಲು ಪಂಚಮಸಾಲಿ ಸಮಾಜದವರು ನಿರ್ಧರಿಸಿದ್ದಾರೆ. ಪಾದಯಾತ್ರೆ ಮೂಲಕ ಬೆಳಗಾವಿಗೆ ಆಗಮಿಸಿ ಹಕ್ಕೊತ್ತಾಯ ಮಂಡಿಸಲಿದ್ದು, ಮಾಡು ಇಲ್ಲವೇ ಮಡಿ ಎಂಬ ಧ್ಯೇಯವಾಕ್ಯದೊಂದಿಗೆ ಹೋರಾಟ ನಡೆಸಲಿದ್ದಾರೆ.

Advertisement

ವಿವಿಧ ಸಂಘಟನೆಗಳ ಪ್ರತಿಭಟನೆ: ಕಬ್ಬಿಗೆ ಸೂಕ್ತ ಬೆಲೆ ನಿಗದಿಗಾಗಿ ಕಬ್ಬು ಬೆಳೆಗಾರರು, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತರು, ಶುಶ್ರೂಷಾ ಧಿಕಾರಿಗಳು, ಎನ್‌ಪಿಎಸ್‌ ರದ್ದತಿಗಾಗಿ ಸರ್ಕಾರಿ ನೌಕರರು, ಮಾದಿಗ ಸಂಘಟನೆಗಳ ಹೋರಾಟ, ಕ್ಷತ್ರೀಯ ಮರಾಠಾ ಸಂಘ, ಗ್ರಾಪಂ ನೌಕರರು, ಅನುದಾನ ರಹಿತ ಶಾಲಾ, ಕಾಲೇಜುಗಳ ಆಡಳಿತ ಮಂಡಳಿ, ನೇಕಾರರು, ಪೌರ ಸೇವಾ ನೌಕರರು, ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘ, ಸಫಾಯಿ ಕರ್ಮಚಾರಿಗಳು, ಉಪ್ಪಾರ ಸಮಾಜದವರು ಸೇರಿದಂತೆ ವಿವಿಧ ಸಂಘಟನೆಗಳ ಹೋರಾಟ ನಡೆಯಲಿದೆ. ಶಕ್ತಿ ಪ್ರದರ್ಶನಕ್ಕಾಗಿ ಮರಾಠಿ ಮೇಳಾವ್‌ ಚಳಿಗಾಲ ಅಧಿವೇಶನದ ಮೊದಲ ದಿನವೇ ಡಿ.19ರಂದು ಎಂಇಎಸ್‌ ವತಿಯಿಂದ ಮರಾಠಿ ಮಹಾ ಮೇಳಾವ್‌ ನಡೆಯಲಿದೆ.

ಶಕ್ತಿ ಪ್ರದರ್ಶನಕ್ಕಾಗಿ ಮರಾಠಿ ಮೇಳಾವ್‌

ಚಳಿಗಾಲ ಅಧಿವೇಶನದ ಮೊದಲ ದಿನವೇ ಡಿ.19ರಂದು ಎಂಇಎಸ್‌ ವತಿಯಿಂದ ಮರಾಠಿ ಮಹಾ ಮೇಳಾವ್‌ ನಡೆಯಲಿದೆ. ಬೆಳಗಾವಿ ಗಡಿ ವಿವಾದವನ್ನು ಮತ್ತೆ ಕೆಣಕುತ್ತಿರುವ ಎಂಇಎಸ್‌ ಪ್ರತಿಭಟನೆಗೆ ಮುಂದಾಗಿದೆ. ನಗರದ ವ್ಯಾಕ್ಸಿನ್‌ ಡಿಪೋ ಮೈದಾನದಲ್ಲಿ ಮಹಾ ಮೇಳಾವ್‌ ನಡೆಯಲಿದ್ದು, ಮರಾಠಿ ಭಾಷಿಕರನ್ನು ಸೇರಿಸಿ ಶಕ್ತಿ ಪ್ರದರ್ಶಿಸಲು ಎಂಇಎಸ್‌ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಹಳ್ಳಿ ಹಳ್ಳಿಗಳಲ್ಲಿ ಎಂಇಎಸ್‌ ನಾಯಕರು ಸುತ್ತಾಡಿ ಮೇಳಾವ್‌ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾರೆ. ಮಹಾರಾಷ್ಟ್ರದ ನಾಯಕರನ್ನೂ ಮೇಳಾವ್‌ಕ್ಕೆ ಆಹ್ವಾನಿಸಿದೆ. ಇದುವರೆಗೆ ನಗರ ಪೊಲೀಸ್‌ ಆಯುಕ್ತರು ಮೇಳಾವ್‌ಕ್ಕೆ ಅನುಮತಿ ನೀಡಿಲ್ಲ.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ಹಿನ್ನೆಲೆಯಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಪ್ರತಿಭಟನೆಗಳು ನಡೆಯಲಿವೆ. ಪ್ರತಿಭಟನಾಕಾರರಿಗೆ ಸ್ಥಳ ನಿಗದಿಪಡಿಸಲಾಗಿದೆ. ಎಲ್ಲರಿಗೂ ಶುದ್ಧ ಕುಡಿಯುವ ನೀರು, ಶೌಚಗೃಹ, ವೈದ್ಯಕೀಯ ಸೌಕರ್ಯ ಒದಗಿಸಲಾಗಿದೆ. ಬಸ್ತವಾಡ ಮತ್ತು ಕೊಂಡಸಕೊಪ್ಪ ಗ್ರಾಮಗಳಲ್ಲಿ ಪ್ರತ್ಯೇಕವಾಗಿ 15 ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆ ನಡೆಸಬಹುದಾಗಿದೆ. ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಗಿದೆ.  -ಡಾ|ಎಂ.ಬಿ.ಬೋರಲಿಂಗಯ್ಯ, ಪೊಲೀಸ್‌ ಕಮಿಷನರ್‌

„ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next