Advertisement

ಸಿದ್ದರಾಮಯ್ಯರಿಗೆ ಮಡಿಕೇರಿಯಲ್ಲೂ ಪ್ರತಿಭಟನೆಯ ಬಿಸಿ: ಕಾಂಗ್ರೆಸ್ ನಿಂದ ಪ್ರತಿರೋಧ

04:30 PM Aug 18, 2022 | Team Udayavani |

ಮಡಿಕೇರಿ: ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಗಮನವನ್ನು ವಿರೋಧಿಸಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಮಡಿಕೇರಿಯಲ್ಲೂ ಪ್ರತಿಭಟನೆ ನಡೆಸಿದವು.

Advertisement

ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಮುಖಂಡರು ಹಾಗೂ ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೊಡಗಿನಲ್ಲಿ ಹತ್ಯೆಗಳನ್ನು ನಡೆಸುವ ಮೂಲಕ ಅನ್ಯಾಯ ಮಾಡಿದ ಟಿಪ್ಪುವಿನ ಪರ ಸಿದ್ದರಾಮಯ್ಯ ಇದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಕಪ್ಪು ಬಾವುಟ ಪ್ರದರ್ಶಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರ ಕಾರು ಬರುತ್ತಿದ್ದಂತೆ ಮುತ್ತಿಗೆ ಹಾಕಲು ಯತ್ನಿಸಿದರಾದರೂ ಪೊಲೀಸರು ಈ ಪ್ರಯತ್ನವನ್ನು ವಿಫಲಗೊಳಿಸಿದರು. ಕೆಲವರು ಮೊಟ್ಟೆ ಎಸೆದರು, ಆದರೆ ಅದು ಕಾರಿಗೆ ಬೀಳುವ ಬದಲು ಪತ್ರಿಕಾ ಛಾಯಾಗ್ರಾಹಕರೊಬ್ಬರ ಮೇಲೆ ಬಿತ್ತು.

ಪೊಲೀಸ್ ಸುರಕ್ಷತೆಯ ನಡುವೆ ಸಿದ್ದರಾಮಯ್ಯ ಅವರು ನಗರದ ಸುದರ್ಶನ ಅತಿಥಿ ಗೃಹಕ್ಕೆ ತೆರಳಿದ ನಂತರವೂ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಪ್ರಮುಖರು ಜನರಲ್ ತಿಮ್ಮಯ್ಯ ವೃತ್ತದಲ್ಲೇ ಪ್ರತಿಭಟನೆ ಮುಂದುವರೆಸಿದರು. ಸಿದ್ದರಾಮಯ್ಯ ಅವರು ಕೊಡಗಿನಿಂದ ಹೊರ ನಡೆಯಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಪ್ರತಿರೋಧ 
ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಂತೆಯೇ ಪಕ್ಷದ ಧ್ವಜದೊಂದಿಗೆ ರಸ್ತೆಗಿಳಿದ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಸಿದ್ದರಾಮಯ್ಯ ಅವರು ಇದ್ದ ಕಡೆ ಬಾರದಂತೆ ಪ್ರತಿರೋಧ ಒಡ್ಡಿದರು. ಈ ಸಂದರ್ಭ ಪೊಲೀಸರು ಮಧ್ಯ ಪ್ರವೇಶಿಸಿ ಹರಸಾಹಸ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದರು.

Advertisement

ಸಿದ್ದರಾಮಯ್ಯ ಅವರು ಅತಿಥಿ ಗೃಹಕ್ಕೆ ತೆರಳಿದ ನಂತರ ಕೆಪಿಸಿಸಿ ಕಾನೂನು ವಿಭಾಗದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ಮೈಸೂರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಕಾಂಗ್ರೆಸ್ಸಿಗರು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿಯೊಬ್ಬರು ಜಿಲ್ಲೆಗೆ ಆಗಮಿಸುವಾಗ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿಲ್ಲ. ರಕ್ಷಣೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಕಳುಹಿಸುವಂತೆ ಒತ್ತಾಯಿಸಿದರು.

ಹೋಗಲಿ ಹೋಗುತ್ತೇವೆ
ಆದರೆ ಮಾಜಿ ಸಿಎಂ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರು ಸಿದ್ದರಾಮಯ್ಯ ಅವರು ಜಿಲ್ಲೆಯಿಂದ ಹೊರ ಹೋಗಲಿ ಆಮೇಲೆ ನಾವು ಹೋಗುತ್ತೇವೆ ಎಂದು ಪಟ್ಟು ಹಿಡಿದರು.

ಉಭಯ ಕಡೆಯಿಂದ ಘೋಷಣೆಗಳು ಜೋರಾಗುತ್ತಲೇ ಇತ್ತು, ಅಲ್ಲದೆ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು.

ಇದನ್ನೂ ಓದಿ : ಸಿದ್ದರಾಮಯ್ಯಗೆ ಸಾವರ್ಕರ್ ಭಾವಚಿತ್ರ ನೀಡಿ, ಕಪ್ಪು ಬಾವುಟದ ಸ್ವಾಗತ

ಎಸ್‌ಪಿ ಮನವೊಲಿಕೆ
ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಎರಡೂ ಕಡೆಯವರೊಂದಿಗೆ ಚರ್ಚಿಸಿದರು.
ಕಾಂಗ್ರೆಸ್ ವಕ್ತಾರ ಎ.ಎಸ್.ಪೊನ್ನಣ್ಣ ಮಾತನಾಡಿ ಅಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ಕಳುಹಿಸಿ ನಾವೂ ಹೋಗುತ್ತೇವೆ ಎಂದರು.
ಬಿಜೆಪಿಗರು ಮಾತನಾಡಿ ಸಿದ್ದರಾಮಯ್ಯ ಅವರು ಹೋಗಲಿ ಆಮೇಲೆ ಹೋಗುತ್ತೇವೆ ಎಂದರು.

ನಂತರ ಪೊಲೀಸರು ಎರಡೂ ಕಡೆಯವರ ಮನವೊಲಿಸಿ ಕಳುಹಿಸಿದರು.ಸಿದ್ದರಾಮಯ್ಯ ಅವರು ಹೋಗಿ ಆಯಿತು ಎಂದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹರ್ಷೋದ್ಘಾರದೊಂದಿಗೆ ತೆರಳಿದರು. ಆದರೆ ಸಿದ್ದರಾಮಯ್ಯ ಅವರು ಸುದರ್ಶನ ಅತಿಥಿ ಗೃಹದಲ್ಲೇ ಇದ್ದಾರೆ ಎಂದು ತಡವಾಗಿ ತಿಳಿಯಿತ್ತಾದರೂ ಅಷ್ಟೊತ್ತಿಗಾಗಲೇ ಪ್ರತಿಭಟನಾಕಾರರೆಲ್ಲ ಸ್ಥಳದಿಂದ ಚದುರಿದ್ದರು.

ಮಾಜಿ ಮುಖ್ಯಮಂತ್ರಿಗಳು ಹೋಗುವವರೆಗೆ ನಗರದ ಪ್ರಮುಖ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next