ಟೆಲ್ ಅವಿವ್: ದೇಶದ ನ್ಯಾಯಾಂಗ ವ್ಯವಸ್ಥೆಗೆ ಮಾರಕ ಎಂದು ವಿಶ್ಲೇಷಿಸಿರುವ ಕಾಯಿದೆಗಳನ್ನು ಜಾರಿಗೆ ತರಲು ಹೊರಟಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರ್ಕಾರದ ವಿರುದ್ಧ ಅಲ್ಲಿನ ನಾಗರಿಕರ ಪ್ರತಿಭಟನೆ ತೀವ್ರಗೊಂಡಿದೆ.
ವಿದೇಶಕ್ಕೆ ಅಧಿಕೃತ ಪ್ರವಾಸಕ್ಕಾಗಿ ಟೆಲ್ ಅವಿವ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ನೆತನ್ಯಾಹು ಅವರ ಕಾರನ್ನು ತಡೆಯಲು ಗುರುವಾರ ಪ್ರತಿಭಟನಾಕಾರರು ಯತ್ನಿಸಿದ್ದಾರೆ.
ತೀರ್ಪನ್ನು ಪರಿಶೀಲಿಸುವ ಸುಪ್ರೀಂ ಕೋರ್ಟ್‌ನ ಅಧಿಕಾರವನ್ನು ಕಸಿಯುವ ಹಾಗೂ ನ್ಯಾಯಾಧೀಶರು ಮತ್ತು ನ್ಯಾಯಮೂರ್ತಿಗಳ ನೇಮಕದಲ್ಲಿ ರಾಜಕಾರಣಿಗಳಿಗೆ ಅಧಿಕಾರವನ್ನು ನೀಡುವ ಕಾಯಿದೆಗಳನ್ನು ಜಾರಿಗೆ ತರಲು ನೆತನ್ಯಾಹು ಸರ್ಕಾರ ಮುಂದಾಗಿದೆ. ಇದರ ವಿರುದ್ಧ ಕಳೆದ ಎರಡು ತಿಂಗಳಿನಿಂದ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.
ನ್ಯಾಯಾಂಗದ ಅಧಿಕಾರವನ್ನು ಕುಂಠಿತಗೊಳಿಸಲಾಗುತ್ತಿದೆ. ಅಲ್ಲದೇ ನೆತನ್ಯಾಹು ಅವರು ತಮ್ಮ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪದಿಂದ ತಪ್ಪಿಸಿಕೊಳ್ಳಲು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ ಈ ಆರೋಪಗಳನ್ನು ನೆತನ್ಯಾಹು ತಳ್ಳಿಹಾಕಿದ್ದಾರೆ.