ಹೂವಿನಹಡಗಲಿ: ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದಾಗಿ ಕಾಲುವೆಗೆ ಭೂಮಿ ಕಳೆದುಕೊಂಡ ರೈತರು ಪರಿಹಾರಕ್ಕೆ ಒತ್ತಾಯಿಸಿ ನೀರಾವರಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಳೆದ 10 ವರ್ಷಗಳ ಹಿಂದೆ ಭೂಮಿ ಕಳೆದುಕೊಂಡಿದ್ದೇವೆ. ಆದರೆ ಸರ್ಕಾರದಿಂದ ಈತನಕ ಪರಿಹಾರ ದೊರಕಿಲ್ಲ. ಅಧಿಕಾರಿಗಳನ್ನು ಕೇಳಿದರೆ ಮೇಲಧಿಕಾರಿಗಳಿಗೆ ಬರೆದಿದ್ದೇವೆ ಇಂದು ಬರುತ್ತೆ, ನಾಳೆ ಬರುತ್ತೆ, ಹೀಗೆ ಹತ್ತಾರು ಕಾರಣಗಳನ್ನು ಹೇಳುತ್ತ ರೈತರನ್ನು ಯಾಮಾರಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ನಮ್ಮ ಹೊಲದ ತುಂಬೆಲ್ಲ ಓಡಾಡಿ ಕಾಲುವೆ ಮಾಡಿ ಹೋಗಿ ಹತ್ತು ವರ್ಷವಾಯಿತು. ನಿಮಗೆ ಪರಿಹಾರ ಕೊಡಬೇಕು ಎನ್ನುವ ಅಲೋಚನೆ ಸಹ ಇಲ್ಲದಾಗಿದೆಯಲ್ಲ. ನಿಮಗೆ ಒಂದು ತಿಂಗಳು ಸಂಬಳ ಇಲ್ಲದಿದ್ದರೆ ಹೇಗೆ ಒದ್ದಾಡುತ್ತಿರಿ ನೋಡಿ ನಾವು ಕಳೆದ ಹತ್ತು ವರ್ಷದಿಂದಲೂ ಇರುವ ಅಲ್ಪ ಸ್ವಲ್ಪ ಹೊಲ ಕಳೆದುಕೊಂಡು ಕುಂತೀವಿ ನಮ್ಮ ಕಷ್ಟ ನಿಮಗೆ ಅರ್ಥವಾಗುವುದಿಲ್ಲವೇ ಎಂದು ಅಧಿಕಾರಿಗಳನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ಪರಿಹಾರ ಕೊಡೋ ತನಕ ಕಚೇರಿ ಬಿಟ್ಟು ಕದಲುವುದಿಲ್ಲೆ ಂದು ಕಚೇರಿಗೆ ಮುತ್ತಿಗೆ ಹಾಕಿದರು.
ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಯೋಜನೆಯಿಂದಾಗಿ ಕಾಲುವೆಗಾಗಿ ಭೂಸ್ವಾಧೀನಪಡಿಸಿಕೊಂಡಿರುವ ಭೂಮಿಯಲ್ಲಿ ಈಗ 602 ಎಕರೆ ಪ್ರದೇಶದಲ್ಲಿನ ರೈತರಿಗೆ ಪರಿಹಾರ ಧನ 27 ಕೋಟಿ ರೂಗಳನ್ನು ವಿತರಣೆ ಮಾಡಬೇಕಾಗಿದೆ. ಈ ವರೆಗೂ ಸಾಕಷ್ಟು ಭಾರಿ ಮೇಲಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ. ಮೇಲಾಗಿ ಬರವಣಿಗೆಗಳ ಮೂಲಕವಾಗಿ ಸಮಸ್ಯೆ ಮನವರಿಕೆ ಮಾಡಲಾಗಿದೆ. ಸಾಧ್ಯವಾದಷ್ಟು ಬೇಗ ಪರಿಹಾರ ವಿತರಣೆ ಮಾಡಲಾಗುತ್ತದೆ ಎಂದು ಪ್ರಭಾರಿ ಕಾರ್ಯಪಾಲಕ ಅಭಿಯಂತರ ಈಟಿ ನಾಗರಾಜ್ ತಿಳಿಸಿದರು.
ಪ್ರತಿಭಟನೆಯಲ್ಲಿ ಹೊಳಗುಂದಿ, ಮುದೇನೂರು, ಹಡಗಲಿ ಪಟ್ಟಣದ ರೈತರು ಭಾಗವಹಿಸಿದ್ದರು. ಶಿವಪ್ರಕಾಶ್ ಸ್ವಾಮಿ, ಲಕ್ಷ್ಮಣ, ಶ್ರೀಧರನಾಯ್ಕ, ಹಕ್ಕಂಡಿ ಈರಪ್ಪ, ತಳವಾರ ಈಶಣ್ಣ, ಹಳ್ಳಿ ಅನಂದ, ಮಂಜುಳಾ ಮತ್ತಿತರರಿದ್ದರು.