Advertisement

ಕುಡಿವ ನೀರಿನ ದರ ಏರಿಕೆ ಖಂಡಿಸಿ ಪ್ರತಿಭಟನೆ

12:22 PM Jul 02, 2019 | Team Udayavani |

ಮಂಡ್ಯ: ನಗರ ಕುಡಿಯುವ ನೀರಿನ ಅವೈಜ್ಞಾನಿಕ ದರ ಏರಿಕೆ ವಿರುದ್ಧ ಕುಡಿಯುವ ನೀರು ಗ್ರಾಹಕರ ಜಾಗೃತಿ ವೇದಿಕೆ ಕಾರ್ಯಕರ್ತರು ಸೋಮವಾರ ನಗರದ ಜಲಮಂಡಳಿ ಎದುರು ಪ್ರತಿಭಟನೆ ನಡೆಸಿದರು.

Advertisement

ಜಲಮಂಡಳಿ ಎದುರು ಜಮಾಯಿಸಿದ ವೇದಿಕೆ ಕಾರ್ಯಕರ್ತರು, ಜನಪ್ರತಿನಿಧಿಗಳ ಗಮನಕ್ಕೇ ತರದೆ ಕುಡಿಯುವ ನೀರಿನ ದರ ಏರಿಸಿರುವ ಅಧಿಕಾರಿಗಳು ಹಾಗೂ ಅದಕ್ಕೆ ಅನುಮತಿ ನೀಡಿರುವ ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕುಡಿಯುವ ನೀರಿನ ದರ ಏರಿಕೆ ನಿರ್ಧಾರವನ್ನು ಕೂಡಲೇ ವಾಪಸ್‌ ಪಡೆಯುವಂತೆ ಆಗ್ರಹಿಸಿದರು. ಜಲಮಂಡಳಿಯಿಂದ ಮಂಡ್ಯ ನಗರಕ್ಕೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ನಾಲ್ಕೈದು ದಿನಗಳಿಗೊಮ್ಮೆ ನೀರು ಸರಬರಾಜು ಮಾಡುತ್ತಿದ್ದು, ಕೆಲವು ಸಲ ಪೂರೈಕೆಯಾಗುವ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ ಎಂದು ಆರೋಪಿಸಿದರು.

ಮನಸಿಗೆ ಬಂದಾಗ ನೀರು: ನಗರದ ವಿವಿಧ ಬಡಾವಣೆಗಳಿಗೆ ನೀರು ಬಿಡುವ ಸಮಯವೂ ನಿಗದಿಯಾಗಿರುವುದಿಲ್ಲ. ಇಷ್ಟಬಂದಾಗ ನೀರು ಸರಬರಾಜು ಮಾಡುವ ಚಾಳಿ ಬೆಳೆಸಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.

ಜನರ ಶೋಷಣೆ: ಈವರೆಗೆ ಕುಡಿಯುವ ನೀರು ಸರಬರಾಜಿಗೆ ಪ್ರತಿ ಮನೆಯಿಂದ 120 ರೂ. ಪಡೆಯಲಾಗುತ್ತಿತ್ತು. ಆ ದರವನ್ನು ಏಪ್ರಿಲ್ 1ರಿಂದ ದಿಢೀರನೆ 282 ರೂ.ಗೆ ಏರಿಕೆ ಮಾಡಲಾಗಿದೆ. ಅಲ್ಲದೆ, 2018 ರಿಂದ 2019ರ ಏಪ್ರಿಲ್ವರೆಗೆ 2229 ರೂ. ಬಾಕಿ ಎಂದು ನೋಟೀಸ್‌ ನೀಡಲಾಗಿದೆ. ಇದರ ಹಿಂದೆ ಜನರನ್ನು ಶೋಷಣೆ ಮಾಡುವ ತಂತ್ರ ಅಡಗಿದೆ ಎಂದು ಆರೋಪಿಸಿದರು.

ನಗರಸಭೆಗೆ ಹೊಸದಾಗಿ ಚುನಾಯಿತರಾದ ಸದಸ್ಯರು ಅಧಿಕೃತವಾಗಿ ಆಡಳಿತಕ್ಕೆ ಬರುವ ತನಕ ದರ ಹೆಚ್ಚಿಸಬಾರದು ಎಂದು ಜಿಲ್ಲಾಧಿಕಾರಿ, ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಆ ಹಿನ್ನೆಲೆಯಲ್ಲಿ ನೀರಿನ ಕರವನ್ನು 120 ರೂ.ನಿಂದ 282 ರೂ.ಗೆ ಹೆಚ್ಚಿಸಿರುವ ದರವನ್ನು ಕೂಡಲೇ ರದ್ದುಪಡಿಸಬೇಕು. ಅಲ್ಲದೆ, ಬಾಕಿ ಹಣ ನೀಡುವ ಆದೇಶವನ್ನೂ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

Advertisement

ಪ್ರತಿಭಟನೆಯಲ್ಲಿ ವೇದಿಕೆ ಕಾರ್ಯಕರ್ತರಾದ ವೆಂಕಟಗಿರಿಯಯ್ಯ, ಸಿ.ಕುಮಾರಿ, ಎಂ.ಎಸ್‌.ಚಿದಂಬರ್‌, ಬೇಕ್ರಿ ರಮೇಶ್‌, ಸತ್ಯಸಾವಿತ್ರಿ, ಸುಚಿತಾ, ಮಲ್ಲೇಶ, ಹೇಮಂತ್‌ಕುಮಾರ್‌, ವೈ.ಥಾಮಸ್‌ ಬೆಂಜಮಿನ್‌, ನಗರಸಭೆ ಮಾಜಿ ಸದಸ್ಯ ಮಹೇಶ್‌, ಸುನೀತಾ, ಶಿವರಾಜ್‌ ಮರಳಿಗ, ಶಾಂತಮ್ಮ, ಕಮಲಮ್ಮ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next