Advertisement

Mangaluru/Udupi: ವಿವಿಧೆಡೆ ಭಯೋತ್ಪಾದನೆ ವಿರೋಧಿ ಹೋರಾಟ ಸಮಿತಿಯಿಂದ ಪ್ರತಿಭಟನೆ

09:53 AM Mar 07, 2024 | Team Udayavani |

ಮಂಗಳೂರು: ಬೆಂಗಳೂರಿನ ಕೆಫೆಯಲ್ಲಿ ಸಂಭವಿಸಿದ ಬಾಂಬ್‌ಸ್ಫೋಟ ಪ್ರಕರಣದ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಭಯೋತ್ಪಾದನೆ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಬುಧವಾರ ಮಂಗಳೂರು ನಗರದ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಯಿತು.

Advertisement

ನ್ಯಾಯವಾದಿ ಸಂದೀಪ್‌ ವಳಲಂಬೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ರಾಜ್ಯ ಸರಕಾರವು ಒಂದು ವರ್ಗವನ್ನು ಓಲೈಸುತ್ತಿದೆ. ಪಾಕ್‌ಪರ ಘೋಷಣೆ ಕೂಗಿದವರ ವಿರುದ್ಧ, ಬಾಂಬ್‌ ಸ್ಫೋಟ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದೆ. ಮಂಗಳೂರಿನಲ್ಲಿ ಹಿಂದೂ ಧರ್ಮದ ಅವಹೇಳನ ಮಾಡಿದ ಶಿಕ್ಷಕಿಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಾಸಕರ ಮೇಲೆ ಕೂಡಲೇ ಎಫ್ಐಆರ್‌ ದಾಖಲಿಸಿತ್ತು. ಸರಕಾರ ಹಿಂದೂ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಹೇಳಿದರು.

ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಪ್ರತಾಪಸಿಂಹ ನಾಯಕ್‌, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಪಾಲಿಕೆ ಮೇಯರ್‌ ಸುಧೀರ್‌ ಶೆಟ್ಟಿ, ಜಗದೀಶ್‌ ಶೇಣವ, ಮೋನಪ್ಪ ಭಂಡಾರಿ, ನಿತಿನ್‌ ಕುಮಾರ್‌ ಪಾಲ್ಗೊಂಡಿದ್ದರು.

ಉಡುಪಿ: ಭಯೋತ್ಪಾದನೆ ವಿರೋಧಿ ಹೋರಾಟ ಸಮಿತಿ ವತಿಯಿಂದ ಪಾಕಿಸ್ಥಾನ ಪರ ಘೋಷಣೆ ಹಾಗೂ ಭಯೋತ್ಪಾದನೆ ಚಟುವಟಿಕೆಗಳ ವಿರುದ್ಧ ಪ್ರತಿಭಟನೆ ಸಭೆ ಬುಧವಾರ ಅಜ್ಜರಕಾಡು ಹುತಾತ್ಮ ಸ್ಮಾರಕದಲ್ಲಿ ನಡೆಯಿತು.

Advertisement

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಧಾಕರ್‌ ಶೆಟ್ಟಿ ಮಾತನಾಡಿ, ರಾಷ್ಟ್ರದ್ರೋಹ ಮಾಡಿದವರನ್ನು ಎಂದಿಗೂ ಕ್ಷಮಿಸಬಾರದು. ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ದೇಶದ್ರೋಹಿಗಳಿಗೆ ಶಿಕ್ಷೆಯಾಗಲೇಬೇಕು. ವಿಧಾನಸೌಧದಲ್ಲಿ ಪಾಕ್‌ಪರ ಘೋಷಣೆ ಕೂಗಿದವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲು ಎಲ್ಲ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ಸಮಾಜ ಸೇವ ಕಾರ್ಯಕರ್ತೆ ಸ್ವರ್ಣಾ ಮಾತನಾಡಿ, ವಿಧಾನಸೌಧದಲ್ಲಿ ಘೋಷಣೆ ಕೂಗಿದವರು ನಾಳೆ ಸಂಸತ್‌ನಲ್ಲಿಯೂ ಪಾಕ್‌ ಪರ ಘೋಷಣೆ ಕೂಗುವ ಸಾಧ್ಯತೆ ಇದೆ. ಕಾಂಗ್ರೆಸ್‌ನ ದೇಶ ವಿರೋಧಿ ಮಾನಸಿಕತೆಗೆ ಇದು ಸಾಕ್ಷಿಯಾಗಿದೆ ಎಂದರು. ಸಮಿತಿಯ ಪ್ರಮುಖ, ಕಾನೂನು ವಿದ್ಯಾರ್ಥಿ ರವಿಚಂದ್ರ ಮಾತನಾಡಿದರು.

ಬ್ರಹ್ಮಾವರ, ಕಾರ್ಕಳ, ಕುಂದಾಪುರ, ಬೈಂದೂರು, ಹೆಬ್ರಿ, ಕಾಪು ಸಹಿತ ನಾನಾ ಭಾಗದಿಂದ ನೂರಾರು ಮಂದಿ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು. ತಾರಾ ಆಚಾರ್ಯ ನಿರೂಪಿಸಿದರು.

ಉಗುಳಿ ಆಕ್ರೋಶ

ಮಂಗಳೂರಿನ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪಾಕ್‌ ಪರ ಘೋಷಣೆ ಕೂಗಿದ ವಿಷಯಕ್ಕೆ ಸಂಬಂಧಿಸಿ ಈ ಘಟನೆ ಸುಳ್ಳಾದರೆ ದೃಶ್ಯ ಮಾಧ್ಯಮ ಪ್ರಮುಖರಿಗೆ ಉಗುಳುವಂತೆ ಹೇಳಿದ್ದು ವೈರಲ್‌ ಆಗಿತ್ತು. ಇದಕ್ಕೆ ಪ್ರತಿಯಾಗಿ ಪ್ರತಿಭಟನೆಯಲ್ಲಿ ಆ ವ್ಯಕ್ತಿಯ ಭಾವಚಿತ್ರಕ್ಕೆ ಉಗುಳಿ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next