ಕೆ.ಆರ್.ಪೇಟೆ: ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದ ಸುತ್ತಮುತ್ತಲ ಕೆಲವು ಪ್ರದೇಶಗಳಲ್ಲಿ ಕಳೆದ 15 ದಿನಗಳಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡು ಅಲ್ಲಿನ ನಿವಾಸಿಗಳು ಕಗ್ಗತ್ತಲಲ್ಲಿ ಕಾಲ ಕಳೆಯುವುದಲ್ಲದೆ, ಕುಡಿಯುವ ನೀರಿಗೆ ತೀವ್ರ ತೊಂದರೆಯುಂಟಾಗಿದ್ದರೂ ಸೆಸ್ಕ್ ಅಧಿಕಾರಿಗಳು, ಸಿಬ್ಬಂದಿ ವರ್ಗ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದ ರಾಮೇಗೌಡ, ಕೆ.ಆರ್.ಪೇಟೆ ಪಟ್ಟಣದಿಂದ ಕೇವಲ 3 ಕಿ.ಮೀ. ದೂರದ ಲ್ಲಿರುವ ಅಗ್ರಹಾರ ಬಾಚಹಳ್ಳಿಯಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಸ್ಥಳದಲ್ಲಿ
ಕಳೆದ 15 ದಿನಗಳಿಂದ ವಿದ್ಯುತ್ ಇಲ್ಲದ ಕಾರಣ ಕುಡಿಯುವ ನೀರಿಗೆ ತೀವ್ರ ತೊಂದರೆ ಉಂಟಾಗಿದೆ. ಕತ್ತಲೆಯಲ್ಲಿ ಬದುಕು ನಡೆಸುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸೆಸ್ಕ್ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ವಿದ್ಯುತ್ ಇಲ್ಲದ ಕಾರಣ ರಾತ್ರಿ ವೇಳೆ ಕಳ್ಳಕಾಕರ ಭಯದಿಂದ ಹಾಗೂ ಚಿರತೆ ಮತ್ತಿತರರ ಕಾಡುಪ್ರಾಣಿಗಳ ಭಯದಿಂದ ದಿನ ದೂಡುವಂತಾಗಿದೆ. ಕೂಡಲೇ ಚಾಮುಂಡೇಶ್ವರಿ ವಿದ್ಯುತ್ ನಿಗಮ ಅಗ್ರಹಾರಬಾಚಹಳ್ಳಿ ಸುತ್ತಮುತ್ತಲ ಪ್ರದೇಶಕ್ಕೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮಹೇಶ್, ಸುಬ್ಬಮ್ಮ, ಕೃಷ್ಣೇಗೌಡ, ದೇವೇಗೌಡ, ಮಧು, ಹರ್ಷಿತಾ, ಮಂಜೇಗೌಡ, ಮಹೇಶ್, ಸುರೇಶ್, ಸರೋಜಮ್ಮ, ನಾಗರಾಜು ಮತ್ತಿತರರು ಭಾಗವಹಿಸಿದ್ದರು.