Advertisement

ತೂತುಕುಡಿ: ವೇದಾಂತ ಘಟಕಕ್ಕೆ ವಿರೋಧ; ಪೊಲೀಸ್‌ ಗೋಲಿಬಾರಿಗೆ 1 ಬಲಿ

04:11 PM May 22, 2018 | udayavani editorial |

ತೂತುಕುಡಿ/ಚೆನ್ನೈ : ಪರಿಸರ ಮಾಲಿನ್ಯದ ಕಾರಣಕ್ಕೆ ತೂತುಕುಡಿಯಲ್ಲಿನ ವೇದಾಂತ ಕಂಪೆನಿಯ ಸ್ಟೆರಲೈಟ್‌ ತಾಮ್ರದ ಘಟವನ್ನು ಮುಚ್ಚಬೇಕೆಂದು ಆಗ್ರಹಿಸಿ ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಪ್ರತಿಭಟನೆಯು ಇಂದು ಹಿಂಸೆಗೆ ತಿರುಗಿದಾಗ ಅನಿವಾರ್ಯಗೊಂಡ ಪೊಲೀಸ್‌ ಫೈರಿಂಗ್‌ಗೆ ಒಬ್ಬ ವ್ಯಕ್ತಿ ಬಲಿಯಾದ ಘಟನೆ ನಡೆದಿದೆ. 

Advertisement

ಪ್ರತಿಭಟನಕಾರರು ಇಂದು ಪೊಲೀಸರ ಮೇಲೆ ಕಲ್ಲೆಸೆದು ಸರಕಾರಿ ವಾಹನಗಳು ಮತ್ತು ಸಾರ್ವಜನಿಕ ಸೊತ್ತುಗಳಿಗೆ ಬೆಂಕಿ ಹಚ್ಚಿದಾಗ ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಗೋಲಿಬಾರ್‌ ನಡೆಸಿದರು. ಈ ಗೋಲಿಬಾರಿಗೆ ಒಬ್ಬ ವ್ಯಕ್ತಿ ಬಲಿಯಾದ ಎಂದು ವರದಿಗಳು ತಿಳಿಸಿವೆ. 

ಇಂದು ಸುಮಾರು 5,000 ಪ್ರತಿಭಟನಕಾರರು ಸ್ಥಳೀಯ ಚರ್ಚ್‌ ಮುಂದೆ ಜಮಾಯಿಸಿದ್ದರು. ಜಿಲ್ಲಾ ಕಲೆಕ್ಟೋರೇಟ್‌ಗೆ ಅವರು ಪ್ರತಿಭಟನ ಮೆರವಣಿಗೆ ನಡೆಸಲು ಉದ್ದೇಶಿಸಿದ್ದರು. ಆದರೆ ಅವರಿಗೆ ಅನುಮತಿ ನಿರಾಕರಿಸಲಾಯಿತು. ಇದರಿಂದ ಕೋಪೋದ್ರಿಕ್ತರಾದ ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲೆಸೆದು ಅವರ ವಾಹನಗಳು  ಹಾಗೂ ಸಾರ್ವಜನಿಕ ಸೊತ್ತುಗಳಿಗೆ ಬೆಂಕಿ ಹಚ್ಚಲು ಮುಂದಾದರು. ಕಲ್ಲೆಸೆತದಿಂದಾಗಿ ಹಲವರು ಗಾಯಗೊಂಡರು. ಆಗ ಪೊಲೀಸರು ಅನಿವಾರ್ಯವಾಗಿ ಗೋಲಿಬಾರ್‌ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಡಿಎಂಕೆ ಕಾರ್ಯಾಧ್ಯಕ್ಷ ಎಂ ಕೆ ಸ್ಟಾಲಿನ್‌ ಅವರು ಪೊಲೀಸ್‌ ಗೋಲಿಬಾರನ್ನು ಖಂಡಿಸಿದರು. ರಾಜ್ಯ ಸರಕಾರ ಈ ವಿವಾದವನ್ನು ಸಾಕಷ್ಟು ಮೊದಲೇ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿ ಬಗೆಹರಿಸಬೇಕಿತ್ತು ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next