ವಿಜಯಪುರ: ಕೇಂದ್ರ ಸರ್ಕಾರದ ಅಡುಗೆ ಅನಿಲದ ಸಿಲಿಂಡರ್ ದರ ಹೆಚ್ಚಿಸಿರುವ ಕ್ರಮವನ್ನು ಖಂಡಿಸಿ ಎಯುಸಿಐ ಕಾರ್ಯಕರ್ತರು ನಗರದ ಬಸವೇಶ್ವರರ ವೃತ್ತದಲ್ಲಿ ಸಿಲಿಂಡರ್ ಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಯುಸಿಐ ಜಿಲ್ಲಾ ಕಾರ್ಯದರ್ಶಿ ಭಗವಾನರೆಡ್ಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಪರಿಣಾಮ ಜನಸಾಮಾನ್ಯ ಕಂಗಾಲಾಗಿದ್ದು, ಕೇಂದ್ರ ಸರ್ಕಾರ ಮೇಲಿಂದ ಮೇಲೆ ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಿಸುತ್ತ ಗಾಯದ ಮೇಲೆ ಬರೆ ಎಳೆಯುತ್ತಿದೆ. ಜನವಿರೋಧಿ ನೀತಿಗಳ ವಿರುದ್ಧ ಜನತೆ ಪ್ರಬಲ ಹೋರಾಟ ಬೆಳೆಸಬೇಕಿದೆ ಎಂದು ದೂರಿದರು.
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ 1 ಸಾವಿರ ರೂ. ದರ ಮೀರಿದ್ದು, ಮತ್ತೆ 50 ರೂ. ದರ ಏರಿಕೆ ಮಾಡಿರುವ ಕ್ರಮ ಜನವಿರೋಧಿಯಾಗಿದೆ. ಉಜ್ವಲ ಯೋಜನೆ ಹೆಸರಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ನೀಡಿದ ಸರ್ಕಾರ ಸಾಂಪ್ರದಾಯಿಕ ಹಾಗೂ ವೆಚ್ಚ ರಹಿತ ಉರುವಲು ಬಳಕೆ ನಾಶಮಾಡಿ, ಬಡವರೂ ಅಡಿಗೆಗೆ ಎಲ್‌ಪಿಜಿ ಸಿಲಿಂಡರ್ ಬಳಸುವಂತೆ ಮಾಡಿ, ಅನಿವಾರ್ಯತೆ ಸೃಷ್ಟಿಸಲಾಗುತ್ತಿದೆ ಎಂದು ಹರಿಹಾಯ್ದರು.
ಕೋವಿಡ್ ಸಂಕಷ್ಟದ ಹೊಡೆತದಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ದೇಶದ ಜನರಿಗೆ ಸರ್ಕಾರ ಬೆಲೆ ಏರಿಕೆಯ ಭಾರ ಹೇರುತ್ತಿದೆ. ಬಂಡವಾಳಿಗರ ಸೇವೆ ಮಾಡುವ ನಮ್ಮ ಆಳ್ವಿಕರು, ಅವರ ಲಾಭ ಹೆಚ್ಚಿಸಲು ಜನಸಾಮಾನ್ಯರ ಮೇಲೆ ಹೊರೆ ಹಾಕುತ್ತಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಕಳೆದ 7 ವರ್ಷಗಳಲ್ಲಿ ಕಾರ್ಪೋರೇಟ್ ಕುಟುಂಬಗಳ 10.7 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಶೇ.33 ರಷ್ಟಿದ್ದ ಕಾರ್ಪೋರೇಟ್ ತೆರಿಗೆಯನ್ನು ಶೇ. 22ಕ್ಕೆ ಇಳಿಸಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬಂಡವಾಳಶಾಹಿ ಪರ ನೀತಿಗಳನ್ನೇ ಬಿಜೆಪಿ ಸರ್ಕಾರ ವೇಗವಾಗಿ ಮುಂದುವರಿಸಿದ್ದು, ಎರಡೂ ಪಕ್ಷಗಳಿಗೆ ವ್ಯತ್ಯಾಸವಿಲ್ಲ ಎಂದು ದೂರಿದರು.
ವಿ.ಎ.ಪಾಟೀಲ, ಬಣಜಗೇರ ಅವರು ಹೋರಾಟವನ್ನು ಬೆಂಬಲಿಸಿ ಮಾತನಾಡಿ, ಕಾಂಗ್ರೆಸ್ ನೀತಿಗಳನ್ನೆ ಬಿಜೇಪಿಯವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ತರಕಾರಿಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು ಜನಸಾಮಾನ್ಯರು, ಕಾರ್ಮಿಕರು ಜೀವನ ನಡೆಸುವುದೇ ದುಸ್ತರವಾಗಿದೆ ಎಂದರು.
ಅಪ್ಪಾಸಾಹೇಬ ಯರನಾಳ ಮಾತನಾಡಿ, ಆರ್ಥಿಕ ಹಿಂಜರಿತ, ಕೊರೊನಾದಿಂದಾಗಿ ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲಿ ಮೂಲಭೂತ ಅವಶ್ಯಕತೆಯಾದ ಎಲ್‌ಪಿಜಿ ದರವನ್ನು ಏರಿಸಿ ಜನಸಾಮಾನ್ಯರು ಅರೆಹೊಟ್ಟೆಯಲ್ಲಿ ಬದುಕುವಂತೆ ಮಾಡ ಹೊರಟಿರುವ ಸರ್ಕಾರದ ಈ ನಿರ್ಧಾರ ನಾಚಿಕೆಗೇಡಿನ ಕ್ರಮ. ಜನ ವಿರೋಧಿ ಆಡಳಿತದ ವಿರುದ್ಧ ಜನರು ಬೀದಿಗೆ ಇಳಿದು ಹೋರಾಟ ಮಾಡಬೇಕು ಎಂದರು.
ಸಿದ್ದಲಿಂಗ ಬಾಗೇವಾಡಿ, ಬಾಳು ಜೇವೂರ, ಎಚ್.ಟಿ.ಮಲ್ಲಿಕಾರ್ಜುನ, ಕಾವೇರಿ, ದೀಪಾ, ಎಚ್.ಗೀತಾ, ಶಿವರಂಜನಿ, ಅನುರಾಗ ಸಾಳುಂಕೆ, ದಸ್ತಗೀರ ಉಕ್ಕಲಿ, ಸುಲೋಚನಾ ತಿವಾರಿ, ಮಹಾದೇವ ಲಿಗಾಡೆ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.