Advertisement

ಪೊಲೀಸರ ದೌರ್ಜನ್ಯ ಖಂಡಿಸಿ ಶವವಿಟ್ಟು ಪ್ರತಿಭಟನೆ

12:20 PM May 28, 2022 | Team Udayavani |

ಕಲಬುರಗಿ: ಜಿಲ್ಲೆಯ ಶಹಾಬಾದ ತಾಲೂಕಿನ ಮರತೂರು ಗ್ರಾಮದ ಮಂಜುನಾಥ ಶಂಕರ ಸಿಂಧೆ (32) ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿ ಕುಟುಂಬದ ಸದಸ್ಯರು ಹಾಗೂ ಮೃತನ ಪತ್ನಿ ಡಿವೈಎಸ್ಪಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಪೊಲೀಸರು ಬುಧವಾರ ಹಾಗೂ ಗುರುವಾರ ಶಂಕರನ ವಿಚಾರಣೆ ನಡೆಸಿ ಸಿಕ್ಕಾಪಟ್ಟೆ ಥಳಿಸಿದ್ದರು. ಅಲ್ಲದೇ ಜೈಲಿಗೆ ತಳ್ಳುವ ಭಯವೊಡ್ಡಿದ್ದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ದೂರಿದರು. ಪೊಲೀಸರು ಹಾಗೂ ಮಗು ಕಳ್ಳತನ ಮಾಡಿದ್ದಾನೆಂದು ದೂರು ನೀಡಿರುವ ಸಾಯಿಬಣ್ಣ ಜೋಗೂರು ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಶವದ ಮೇಲಿದ್ದ ಹೊಡೆದ ಗುರುತುಗಳನ್ನು ಸಿಪಿಐಗೆ ತೋರಿಸಿದರು. ಈ ವೇಳೆ ತುಸು ವಾಗ್ವಾದವೂ ನಡೆಯಿತು. ಸಂಜೆ ಪೊಲೀಸರು, ದೂರುದಾರರು ಮತ್ತು ಮೃತನ ಪತ್ನಿ ಸೀತಾ ಮಧ್ಯೆ ಮಾತುಕತೆ ನಡೆದು ಶವ ತೆಗೆದುಕೊಂಡು ಮರತೂರಕ್ಕೆ ಹೋಗಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರಕರಣ: ಬುಧವಾರ ಮಂಜುನಾಥ ಪತ್ನಿ ಸೀತಾಳ ಅಣ್ಣ ನಾಗೇಶ್‌ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಮಗನನ್ನು ತಾಯಿ ಪ್ರತಿಭಾಳ ಬಳಿಯಿಂದ ಕರೆದುಕೊಂಡು ಹೋಗಿದ್ದ. ಅದರೆ ಆ ಮಗುವನ್ನು ಸೀತಾಳ ಗಂಡ ಮಂಜುನಾಥ ಕರೆದುಕೊಂಡು ಹೋಗಿದ್ದಾನೆಂದು ಪ್ರತಿಭಾಳ ತಂದೆ ಸಾಯಿಬಣ್ಣ ಜೋಗೂರು ಪೊಲೀಸರಿಗೆ ದೂರು ನೀಡಿದ್ದರು. ಇದರಿಂದಾಗಿ ಬುಧವಾರ ಮತ್ತು ಗುರುವಾರ ಕರೆಯಿಸಿ ಮಂಜುನಾಥನನ್ನು ಪೊಲೀಸರ ವಿಚಾರಣೆ ಮಾಡಿದ್ದರು.

ಡೆತ್‌ ನೋಟ್‌ನಲ್ಲೇನಿದೆ?

Advertisement

ಮಂಜುನಾಥ ನೇಣು ಹಾಕಿಕೊಳ್ಳುವ ಮುನ್ನ ಡೆತ್‌ ನೋಟು ಬರೆದಿಟ್ಟಿದ್ದಾನೆ. “ನಾನು ಮರ್ಯಾದಸ್ತ ಕುಟುಂಬದವ. ಜೀವನದಲ್ಲಿ ಯಾವ ತಪ್ಪು ಮಾಡಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ. ಎಫ್‌ಐಆರ್‌ ಮಾಡಿದ್ದಲ್ಲದೇ, ನನ್ನನ್ನು ಮತ್ತು ಹೆಂಡತಿಯನ್ನು ಜೈಲಿಗೆ ಹಾಕುವುದಾಗಿ ಹೇಳಿದ್ದಾರೆ. ಇದು ನನಗಾದ ಅವಮಾನ. ನನ್ನ ಸಾವಿಗೆ ಸಾಯಿಬಣ್ಣ ಜೋಗೂರು, ಶರಣಮ್ಮ, ಪ್ರತಿಭಾ ಮತ್ತು ನಾಗೇಶ ಕಾರಣ. ಹೆಂಡತಿ ಸೀತಾಗಳಿಗೆ ಕ್ಷಮೆ ಕೋರಿ ನಾನು ನಿನಗೆ ಮೋಸ ಮಾಡಿದೆ. ನಿಮ್ಮನ್ನು ಬಿಟ್ಟು ಹೋಗುತ್ತಿದ್ದೇನೆ’ ಎಂದು ಬರೆದು ಮೃತಪಟ್ಟಿದ್ದಾನೆ.

ನಮ್ಮ ಪೊಲೀಸರು ಯಾವುದೇ ಟಾರ್ಚ್‌ರ್‌ ನೀಡಿಲ್ಲ. ಮಗು ಕಳ್ಳತನ ಪ್ರಕರಣದ ದೂರಿನ ಹಿನ್ನೆಲೆಯಲ್ಲಿ ಮಂಜುನಾಥನನ್ನು ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿದ್ದು ನಿಜ. ಆದರೆ ಹೊಡೆದಿಲ್ಲ. ಹೊಡೆತದಿಂದ ಆತ ಸತ್ತಿಲ್ಲ. ಆತ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಡೆತ್‌ ನೋಟ್‌ ಕೂಡ ಬರೆದಿಟ್ಟಿದ್ದಾನೆ. -ಇಶಾ ಪಂತ್‌, ಎಸ್ಪಿ

ನನ್ನ ಗಂಡನಿಗೆ ಪೊಲೀಸರು ಹೊಡೆದಿದ್ದಾರೆ. ಅಲ್ಲದೇ ಜೈಲಿಗೆ ಹಾಕುವುದಾಗಿ ಹೇಳಿದ್ದಾರೆ. ಇದರಿಂದ ಆತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗೇಶ ಮತ್ತು ಪ್ರತಿಭಾಗಳಿಗೆ ಜಗಳ ಇತ್ತು. ನಾಗೇಶ ತನ್ನ ಮಗನನ್ನು ತಾನು ಕರೆದುಕೊಂಡು ಹೋದರೆ ನನ್ನ ಗಂಡನ ವಿರುದ್ಧ ದೂರು ನೀಡಿದವರ ವಿರುದ್ಧ ಕ್ರಮ ಆಗಬೇಕು, ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. -ಸೀತಾ, ಮೃತ ಮಂಜುನಾಥ ಪತ್ನಿ

Advertisement

Udayavani is now on Telegram. Click here to join our channel and stay updated with the latest news.

Next