Advertisement

ಮೈಮೇಲೆ ಕಸ ಸುರಿದುಕೊಂಡು ಪ್ರತಿಭಟನೆ

05:59 PM Nov 21, 2017 | Team Udayavani |

ದಾವಣಗೆರೆ: ಯಾವುದೇ ಕಾರಣ ನೀಡದೇ ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದನ್ನು ವಿರೋಧಿಸಿ ಸೋಮವಾರ ಜಯದೇವ ವೃತ್ತದಲ್ಲಿ ಮಹಿಳೆಯರು ಸೇರಿ 10 ಮಂದಿ ಪೌರ ಕಾರ್ಮಿಕರು ಮೈಮೇಲೆ ಕಸ ಸುರಿದುಕೊಂಡು, ಆ ಕಸದ ರಾಶಿಯಲ್ಲೇ ಕುಳಿತು ಪ್ರತಿಭಟಿಸಿದ್ದಾರೆ.

Advertisement

ಗುತ್ತಿಗೆ ಆಧಾರಿತ ಪೌರ ಕಾರ್ಮಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಂಜೆ ತುರ್ತು ಸಭೆ ನಡೆಸಿ, ಪೌರ ಕಾರ್ಮಿಕರಿಗೆ ಆಗಿರುವ ಅನ್ಯಾಯ ಪರಿಶೀಲನೆಗೆ ಮೇಯರ್‌ ಅಧ್ಯಕ್ಷತೆಯಲ್ಲಿ ತಲಾ ಐವರು ನಗರಪಾಲಿಕೆ ಸದಸ್ಯರು, ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ.

ಪ್ರತಿಭಟನೆ ಏಕೆ…?: 2002 ರಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ರತ್ನಮ್ಮ, ಏಕಾಂತಪ್ಪ, ಸಾವಿತ್ರಮ್ಮ, ಹೊನ್ನಮ್ಮ, ಲಲಿತಮ್ಮ, ಜಯಮ್ಮ ಒಳಗೊಂಡಂತೆ 10 ಜನರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿರುವುದನ್ನು ವಿರೋಧಿಸಿ ಕಾರ್ಮಿಕರು ದಿಢೀರ್‌ ಪ್ರತಿಭಟನೆ ನಡೆಸಿದರು. 15 ವರ್ಷದಿಂದ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ತಿಂಗಳಿಗೆ 800 ರೂಪಾಯಿಗೆ ಕೆಲಸಕ್ಕೆ ಸೇರಿಕೊಂಡಿದ್ದೆವು. ಇದೇ ಕೆಲಸ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಏಕಾಏಕಿ ಕೆಲಸಕ್ಕೆ ಬರಬೇಡಿ, ನಿಮ್ಮನ್ನು ತೆಗೆದುಹಾಕಿದ್ದೇವೆ ಎಂದರೆ ನಾವು ಎಲ್ಲಿಗೆ ಹೋಗಬೇಕು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

20 ಜನ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೆವು. 10 ಜನರನ್ನು ಕೆಲಸದಿಂದ ತೆಗೆದು ಹಾಕಿದ್ದು, ಅವರು ಕೋರ್ಟ್‌ ಮೊರೆ ಹೋಗಿದ್ದಾರೆ. ನಾವು ದಿನ ಕೆಲಸ ಮಾಡಿಕೊಂಡು ಬರುತ್ತಿದ್ದೆವು. ಬೆಳಗ್ಗೆ 5.30 ರ ಹೊತ್ತಿಗೆ ಜಯದೇವ ಸರ್ಕಲ್‌ಗೆ ಕೆಲಸಕ್ಕೆ ಬಂದಾಗ, ನೀವು ಕೆಲಸಕ್ಕೆ ಬರಬೇಡಿ. ನಿಮ್ಮನ್ನು ತೆಗೆದು ಹಾಕಲಾಗಿದೆ ಎಂದರು. ಯಾವ ಕಾರಣಕ್ಕೆ ತೆಗೆದು ಹಾಕಿದ್ದೀರಿ ಎಂದು ಕೇಳಿದರೆ ಯಾರೂ ಏನೂ ಹೇಳುತ್ತಿಲ್ಲ. ನಮ್ಮನ್ನು ಇದ್ದಕ್ಕಿದ್ದಂತೆ ಕೆಲಸದಿಂದ ತೆಗೆದುಹಾಕಿ ಬೇರೆಯವರನ್ನು ಸೇರಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಏನು ಎಂಬುದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ತಿರುಗಿ ನೋಡಲೇ ಇಲ್ಲ
ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ಕೆಲಸದಿಂದ ತೆಗೆದುಹಾಕಿರುವುದನ್ನು ವಿರೋಧಿಸಿ ಮಹಿಳೆಯರು ಒಳಗೊಂಡಂತೆ 10 ಪೌರ ಕಾರ್ಮಿಕರು ಮೈಮೇಲೆ ಕಸ ಸುರಿದುಕೊಂಡಿದ್ದಲ್ಲದೆ ಕಸದ ರಾಶಿಯಲ್ಲೇ ಕುಳಿತು 5 ಗಂಟೆಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರೂ ಯಾವೊಬ್ಬ ಅಧಿಕಾರಿಯೂ ಪ್ರತಿಭಟನಾಕಾರರತ್ತ ತಿರುಗಿಯೂ ನೋಡಲಿಲ್ಲ. ಯಾವ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕಲಾಗಿದೆ ಎಂಬುದರ ಬಗ್ಗೆಯಾದರೂ ತಿಳಿಸಿ ಎಂದರೂ ಉತ್ತರ ನೀಡಲು ಯಾರೂ ಇರಲೇ ಇಲ್ಲ. ಕೆಲ ಮಹಿಳಾ ಪೌರ ಕಾರ್ಮಿಕರು ತಮ್ಮ ಪುಟ್ಟ ಮಕ್ಕಳೊಂದಿಗೆ ನಡು ರಸ್ತೆಯಲ್ಲೇ ಕಸದ ರಾಶಿಯಲ್ಲಿ ಕುಳಿತುಕೊಂಡು ಪ್ರತಿಭಟನೆ ನಡೆಸಿದರು. ಸೌಜನ್ಯಕ್ಕೂ ಅಧಿಕಾರಿಗಳು ಅತ್ತ ಸುಳಿಯಲೇ ಇಲ್ಲ. ಬೇರೆಯವರು ಪ್ರತಿಭಟನಾಕಾರರಿಗೆ ತಿಂಡಿ ವ್ಯವಸ್ಥೆ ಮಾಡಿದರು. 

Advertisement

ಬೇನಾಮಿ ಕೆಲಸಗಾರರು?
ಗುತ್ತಿಗೆ ಆಧಾರಿತ ಪೌರ ಕಾರ್ಮಿಕರ ಖಾಯಂ ಮಾಡುವ ವೇಳೆಗೆ ಪಟ್ಟಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಒಳಗೊಂಡಂತೆ
ಮುಖಂಡರಿಗೆ ತೀರಾ ಬೇಕಾದವರ ಹೆಸರು ಸೇರಿಸುವ ಪ್ರಯತ್ನ ನಡೆದಿದೆ ಎಂಬ ಮಾತು ಕೇಳಿ ಬರುತ್ತಿವೆ. ಪ್ರತಿಭಟನೆ ನಡೆಸಿದ ಕಾರ್ಮಿಕರ ಖಾತೆಗೆ ನೇರವಾಗಿ ವೇತನ ಪಾವತಿ ಮಾಡಲಾಗುತ್ತಿದೆ. ಅಲ್ಲದೆ ಆರೋಗ್ಯ  ವಿಮೆ, ಭವಿಷ್ಯ ನಿಧಿ ವಂತಿಗೆ ವೇತನದಲ್ಲಿ ಕಡಿತ ಮಾಡಲಾಗುತ್ತಿದೆ. ಆದರೂ, ಯಾವುದೇ ಕಾರಣ ಇಲ್ಲದೆ  ಏಕಾಏಕಿ ಕೆಲಸದಿಂದ ತೆಗೆದುಹಾಕಿರುವ ಹಿಂದೆ ತಮ್ಮವರಿಗೆ ಅನುಕೂಲ ಮಾಡಿಕೊಡುವ ಇರಾದೆಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next