ಬೆಂಗಳೂರು: ದೇವದಾಸಿ ಮಹಿಳೆಯರ ಮಾಸಿಕ ಸಹಾಯಧನವನ್ನು ಐದು ಸಾವಿರ ರೂ.ಹೆಚ್ಚಳ ಹಾಗೂ ಜೀವನೋಪಾಯಕ್ಕೆ ಕೃಷಿ ಭೂಮಿ ನೀಡಬೇಕು ಎಂದು ಆಗ್ರಹಿಸಿ ನೂರಾರು ಮಂದಿ ದೇವದಾಸಿ ಮಹಿಳೆಯರು ಮಂಗಳವಾರ ಸ್ವಾತಂತ್ರ್ಯ ಉದ್ಯಾನದ ಪಕ್ಕದ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ನಡೆದ ಪ್ರತಿಭಟನೆಯಲ್ಲಿ ಸಾಮಾಜಿಕ ದೌರ್ಜನ್ಯಕ್ಕೊಳಗಾದ ದೇವದಾಸಿ ಮಹಿಳೆಯರು ಮತ್ತು ಅವರ ಕುಟುಂಬದವರ ಪುನರ್ವಸತಿಗಾಗಿ ಪ್ರತಿ ವರ್ಷ 5 ಸಾವಿರ ಕೋಟಿ ರೂ. ಮೀಸಲಿಡಬೇಕು.
10 ಸೆಂಟ್ಸ್ ಸ್ಥಳದಲ್ಲಿ ಉಚಿತ ಮನೆ ಕಟ್ಟಿಸಿಕೊಡಬೇಕು. ಮಕ್ಕಳ ವಿದ್ಯಾಭ್ಯಾಸ ಮತ್ತು ಶಿಕ್ಷಣಕ್ಕೆ ನೆರವಾಗುವುದು, ದೇವದಾಸಿ ಪದ್ಧತಿ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವುದು ಹಾಗೂ ಉದ್ಯೋಗ ಖಾತ್ರಿ ಕೆಲಸವನ್ನು ಕನಿಷ್ಠ 200 ದಿನಗಳಿಗೆ ವಿಸ್ತರಿಸಿ ಕೂಲಿಯನ್ನು 600 ರೂ.ಗೆ ಹೆಚ್ಚಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ರಾಜ್ಯದಲ್ಲಿ ಸುಮಾರು 70 ಸಾವಿರ ಮಹಿಳೆಯರಿದ್ದಾರೆ. 40 ವರ್ಷ ಮೇಲ್ಪಟ್ಟ ದೇವದಾಸಿ ಮಹಿಳೆಯರಿಗೆ ಮಾತ್ರ ರಾಜ್ಯ ಸರ್ಕಾರದಿಂದ ಮಾಸಿಕ ಒಂದುವರೆ ಸಾವಿರ ರೂ. ಸಹಾಯಧನವನ್ನು ನೀಡಲಾಗುತ್ತದೆ. ಪರಿಣಾಮ 40 ವರ್ಷದೊಳಗಿನ ಸಾವಿರಾರು ಮಹಿಳೆಯರು ಸಹಾಯಧನ, ಮಾಸಾಶನ, ಅನುದಾನದಿಂದ ವಂಚಿತರಾಗಿದ್ದಾರೆ. ಹೀಗಾಗಿ ವಯೋಮಾನ ಮಿತಿಯನ್ನು ಕಡಿತಗೊಳಿಸಿ ಸಹಾಯಧನವನ್ನು 5 ಸಾವಿರ ರೂ.ಗೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಜಯಮಾಲಾ ಅವರಿಗೆ ನೀಡಲಾಗಿದ್ದು, ಪ್ರತಿಭಟನೆಯಲ್ಲಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಗೌರವಾಧ್ಯಕ್ಷ ಯು.ಬಸವರಾಜು, ಅಧ್ಯಕ್ಷರಾದ ಟಿ.ವಿ ರೇಣುಕಮ್ಮ, ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಸೇರಿದಂತೆ ಮುಖಂಡರು ಪಾಲ್ಗೊಂಡಿದ್ದರು.