Advertisement

ಪಾಕ್ ನಲ್ಲಿ ಖಾನ್ ವಿರುದ್ಧ ಲಕ್ಷಾಂತರ ಮಂದಿ ಬೀದಿಗಿಳಿದಿದ್ದೇಕೆ, ಯಾರೀತ ಪ್ರಭಾವಿ ಮೌಲ್ವಿ?

08:16 AM Nov 02, 2019 | Nagendra Trasi |

ಇಸ್ಲಾಮಾಬಾದ್:ಜಮ್ಮು-ಕಾಶ್ಮೀರದ ವಿಚಾರದಲ್ಲಿ ಇಮ್ರಾನ್ ಖಾನ್ ಪದೇ, ಪದೇ ಕ್ಯಾತೆ ತೆಗೆಯುವ ಮೂಲಕ ಸುದ್ದಿಯಲ್ಲಿದ್ದು, ಮತ್ತೊಂದೆಡೆ ಇಮ್ರಾನ್ ಖಾನ್ ವಿರುದ್ಧವೇ ಪ್ರಭಾವಿ ಮೌಲ್ವಿ ತನ್ನ ಲಕ್ಷಾಂತರ ಮಂದಿ ಬೆಂಬಲಿಗರೊಂದಿಗೆ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ಕಾರಣ ಇಮ್ರಾನ್ ಖಾನ್!

Advertisement

ಪಾಕಿಸ್ತಾನ ಪ್ರಧಾನಿ ಹುದ್ದೆಯಿಂದ ಇಮ್ರಾನ್ ಖಾನ್ ಕೆಳಗಿಳಿಯಬೇಕು ಎಂದು ಆಗ್ರಹಿಸಿ ಬಲಪಂಥೀಯ ಜಮಾತ್ ಉಲೇಮಾ ಇ ಇಸ್ಲಾಮ್ ಫಾಝ್ಲ್ (ಜೆಯುಐ-ಎಫ್)ನ ಮುಖ್ಯಸ್ಥ ಮೌಲಾನ ಫಾಝ್ಲುರ್ ರೆಹಮಾನ್ ದಕ್ಷಿಣ ಸಿಂಧ್ ಪ್ರಾಂತ್ಯದಿಂದ ಅಕ್ಟೋಬರ್ 27ರಂದು ವಿವಿಧ ವಿರೋಧ ಪಕ್ಷಗಳ ಜತೆ ಆಜಾದಿ ಮಾರ್ಚ್ (ಸ್ವಾತಂತ್ರ್ಯ ಹೋರಾಟ)ಗೆ ಚಾಲನೆ ಕೊಟ್ಟಿದ್ದರು.

2018ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅಕ್ರಮವಾಗಿ ಗೆದ್ದಿರುವುದಾಗಿ ಮೌಲ್ವಾನಾ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಪ್ರಧಾನಿ ಖಾನ್ ಆರ್ಥಿಕ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದು, ಕಳಪೆ ಆಡಳಿತದಿಂದ ಜನಸಾಮಾನ್ಯರು ಕಷ್ಟಪಡುವಂತಾಗಿದೆ ಎಂದು ದೂರಿದ್ದಾರೆ.

ಸಿಂಧ್ ಪ್ರಾಂತ್ಯದಿಂದ ಹೊರಟಿದ್ದ ಈ “ಆಜಾದಿ ಮಾರ್ಚ್” ನಿಗದಿಯಂತೆ ಅಕ್ಟೋಬರ್ 31ರಂದು ಇಸ್ಲಾಮಾಬಾದ್ ತಲುಪಬೇಕಿತ್ತು. ಆದರೆ ನೂರಾರು ವಾಹನಗಳು ನಿಧಾನಗತಿಯಲ್ಲಿ ಆಗಮಿಸುತ್ತಿದ್ದರಿಂದ ವಿಳಂಬವಾಗಿದೆ ಎಂದು ಜೆಯುಐ-ಎಫ್ ಮುಖಂಡ ತಿಳಿಸಿರುವುದಾಗಿ ವರದಿ ವಿವರಿಸಿದೆ.

ಪಾಕಿಸ್ತಾನ ಪ್ರಧಾನಿ ಖಾನ್ ವಿರುದ್ಧದ ಜೆಯುಐ-ಎಫ್ ನ ಪ್ರತಿಭಟನೆಗೆ ಪ್ರಮುಖ ವಿರೋಧ ಪಕ್ಷಗಳಾದ ಪಾಕಿಸ್ತಾನ್ ಮುಸ್ಲಿಂ ಲೀಗ್ –ನವಾಜ್(ಪಿಎಂಎಲ್ –ಎನ್) ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಕೂಡಾ ಬೆಂಬಲ ನೀಡಿದೆ.

Advertisement

ನೂರಾರು ಟ್ರಕ್, ಕಾರುಗಳಲ್ಲಿ ಆಗಮಿಸುತ್ತಿರುವ ಪ್ರತಿಭಟನಾಕಾರರು ಕಪ್ಪು ಮತ್ತು ಬಿಳಿ ಬಣ್ಣದ ಬಾವುಟ ಹಿಡಿದು, ರಾಜಕೀಯ ಹಾಡನ್ನು ಲೌಡ್ ಸ್ಪೀಕರ್ ನಲ್ಲಿ ಮೊಳಗಿಸುತ್ತಾ ಸಾಗಿರುವುದಾಗಿ ವರದಿ ವಿವರಿಸಿದೆ.

ಕಳೆದ ಬಾರಿ ಪಾಕ್ ನಲ್ಲಿ ನಡೆದ ಚುನಾವಣೆಯಲ್ಲಿ 342 ಸಂಸತ್ ಸದಸ್ಯರನ್ನೊಳಗೊಂಡ ಚುನಾವಣೆಯಲ್ಲಿ ಖಾನ್ ನೇತೃತ್ವದ ಪಿಟಿಐ ಪಕ್ಷ 156 ಸ್ಥಾನಗಳಲ್ಲಿ ಜಯಗಳಿಸಿತ್ತು. ಇದು ಕಳೆದ 23 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಬಹುಮತ ಪಡೆದು ಅಧಿಕಾರಕ್ಕೇರಿದಂತಾಗಿತ್ತು. ಅಲ್ಲದೇ ಪ್ರಾಂತೀಯ ಸರಕಾರವಾದ ಪಂಜಾಬ್ ಮತ್ತು ಖೈಬರ್ ಪಖ್ತುನ್ ಖಾವಾ ಪ್ರದೇಶದಲ್ಲಿಯೂ ಖಾನ್ ಪಕ್ಷ ಹಿಡಿತ ಸಾಧಿಸಿತ್ತು.

ಫಾಝುಲ್ ಉರ್ ರೆಹಮಾನ್:

ಪಾಕಿಸ್ತಾನದ ರಾಜಕಾರಣಿ, ಜಮಾತ್ ಉಲೇಮಾ ಇ ಇಸ್ಲಾಮ್(ಎಫ್)ನ ಅಧ್ಯಕ್ಷರಾಗಿರುವ ಫಾಝುಲ್ ಉರ್ ರೆಹಮಾನ್ 2004ರಿಂದ 2007ರವರೆಗೆ ಪಾಕ್ ಸರಕಾರದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಚುನಾವಣೆಯಲ್ಲಿ ಅಕ್ರಮ ಎಸಗಿ ಜಯಸಾಧಿಸಿರುವ ಪಾಕ್ ಪ್ರಧಾನಿ ರಾಜೀನಾಮೆ ಕೊಡುವವರೆಗೂ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡುವ ಮೂಲಕ ಆಜಾದಿ ಮಾರ್ಚ್ ಗೆ ಚಾಲನೆ ನೀಡಿದ್ದಾರೆ.

1953ರ ಜೂನ್ 19ರಂದು ಜನಿಸಿರುವ ಫಾಝಲ್ ದೇರಾ ಇಸ್ಮಾಯಿಲ್ ಖಾನ್ ಎಂಬ ಧಾರ್ಮಿಕ ಮತ್ತು ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಕೈರೋದ ಅಲ್ ಅಝಹರ್ ಯೂನಿರ್ವಸಿಟಿಯಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದರು. ಫಾಝಲ್ ತಂದೆ ಮುಫ್ತಿ ಮಹಮುದ್ 1972ರಿಂದ 1973ರವರೆಗೆ ಖೈಬರ್ ಪಖ್ತುನ್ ಖಾವಾದ ಮುಖ್ಯಮಂತ್ರಿಯಾಗಿದ್ದರು. 1980ರಲ್ಲಿ ತಂದೆ ನಿಧನರಾದ ಬಳಿಕ ತನ್ನ 27ನೇ ವಯಸ್ಸಿನಲ್ಲಿಯೇ ಫಾಝಲ್ ಜಮಾತ್ ಉಲೇಮಾ ಇ ಇಸ್ಲಾಮ್ ನ ಪ್ರಧಾನ ಕಾರ್ಯದರ್ಶಿಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next