Advertisement

ಬಸ್‌ ನಿಲ್ಲಿಸದ್ದಕ್ಕೆ ರಸ್ತೆ ಸುತ್ತುವರಿದು ಪ್ರತಿಭಟನೆ

04:54 PM Jul 28, 2019 | Team Udayavani |

ಪಿರಿಯಾಪಟ್ಟಣ: ಕೆಎಸ್‌ಆರ್‌ಟಿಸಿ ಬಸ್‌ ನಿಲುಗಡೆಗೆ ಆಗ್ರಹಿಸಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಶನಿವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

Advertisement

ಶನಿವಾರ ಬೆಳಗ್ಗೆ 11 ಗಂಟೆಗೆ ಕಾಲೇಜಿನಿಂದ ಹೊರಬಂದ ವಿದ್ಯಾರ್ಥಿ ಗಳು ಪಿರಿಯಾಪಟ್ಟಣ – ಬೆಟ್ಟದಪುರ ಹಾಸನ ಮುಖ್ಯ ರಸ್ತೆಯನ್ನು ಸುತ್ತು ವರಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಅಡ್ಡಗಟ್ಟಿದ್ದರಿಂದ ಎರಡೂ ಬದಿಗಳಲ್ಲಿ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಪಟ್ಟಣದಿಂದ 3 ಕಿ.ಮೀ. ದೂರ: ಪಿರಿಯಾಪಟ್ಟಣದ ಹರವೆ ಮಲ್ಲರಾಜ ಪಟ್ಟಣದ ಬಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದ್ದು ಪಟ್ಟಣದಿಂದ ಸುಮಾರು 3 ಕಿ.ಮೀ. ದೂರವಾಗುತ್ತದೆ. ಪಿರಿಯಾಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕಾಲೇಜಿಗೆ ತೆರಳಲು ಮತ್ತು ಕಾಲೇಜಿ ನಿಂದ ಪಟ್ಟಣಕ್ಕೆ ಹಿಂದಿರುಗಲು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಅವಲಂಬಿಸಿದ್ದಾರೆ. ಈ ರಸ್ತೆಯಲ್ಲಿ ಸಂಚರಿಸುವ ಸಾರಿಗೆ ಬಸ್‌ಗಳು ಕಾಲೇಜು ಬಳಿ ನಿಲುಗಡೆ ನೀಡದೆ ನಿತ್ಯ ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿ ಗಳಿಗೆ ತೊಂದರೆಯಾಗುತ್ತಿದೆ.

ಬೆಳಗ್ಗೆ ಕಾಲೇಜಿಗೆ ಬರುವಾಗ ಹಾಗೂ ಸಂಜೆ ವೇಳೆ ಕಾಲೇಜಿನಿಂದ ತೆರಳುವಾಗ ಸೂಕ್ತ ಸಮಯದಲ್ಲಿ ಬಸ್‌ಗಳು ಸಿಗದೆ ಪರದಾಡುವಂತಾಗಿದೆ. ಗ್ರಾಮೀಣ ಪ್ರದೇಶಗಳಿಗೆ ತೆರಳಲು ಇರುವ ಬಸ್‌ಗಳ ಸಂಖ್ಯೆ ವಿರಳವಾಗಿರುವುದರಿಂದ ಮನೆಗಳಿಗೆ ನಿಗದಿತ ಸಮಯದಲ್ಲಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡರು.

ಸೂಚನಾ ಪ್ರತಿ: ಪಟ್ಟಣದ ಬಸ್‌ ನಿಲ್ದಾಣದಲ್ಲಿರುವ ಸಂಚಾರ ನಿಯಂತ್ರ ಣಾಧಿಕಾರಿಗಳ ಕೊಠಡಿಯಲ್ಲಿ ಕಾಲೇಜು ಬಳಿ ಬಸ್‌ ನಿಲುಗಡೆ ಮಾಡುವಂತೆ ಸೂಚನಾ ಪ್ರತಿಯನ್ನು ನೀಡಲಾಗಿದೆ. ಈ ಬಗ್ಗೆ ಹಲವು ಬಾರಿ ನಿರ್ವಾಹಕ ಮತ್ತು ಚಾಲಕರಲ್ಲಿ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಕೆಲವು ನಿರ್ವಾಹಕರು ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಅವಲತ್ತು ಕೊಂಡರು.

Advertisement

ಸುದ್ದಿ ತಿಳಿದ ಕೂಡಲೇ ಡಿಪೋ ವ್ಯವ ಸ್ಥಾಪಕ ದರ್ಶನ್‌ ಮತ್ತು ಮೈಮುಲ್ ನಿರ್ದೇಶಕ ಪಿ.ಎಂ. ಪ್ರಸನ್ನ ಧಾವಿಸಿ, ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು.

ಬೇಡಿಕೆ: ಬಳಿಕ ಮಾತನಾಡಿದ ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ, ಕಾಲೇಜು ಬಳಿ ಕೋರಿಕೆ ನಿಲುಗಡೆ ಫ‌ಲಕ ಅಳವಡಿಸಬೇಕು. ಈ ಮಾರ್ಗದಲ್ಲಿ ಸಂಚರಿಸುವ ಪ್ರತಿ ಬಸ್‌ ಹಾಗೂ ಈ ಮಾರ್ಗದಲ್ಲಿರುವ ಡಿಪೋಗೆ ತೆರಳುವ ಮತ್ತು ಡಿಪೋದಿಂದ‌ ಬಸ್‌ ನಿಲ್ದಾಣಕ್ಕೆ ಬರುವ ಬಸ್‌ಗಳು ಕಾಲೇಜು ಬಳಿ ಕಡ್ಡಾಯ ನಿಲುಗಡೆ ಮಾಡುವಂತೆ ಸಿಬ್ಬಂದಿಗೆ ಸೂಚಿಸಲು ಡಿಪೋ ವ್ಯವಸ್ಥಾಪಕ ದರ್ಶನ್‌ಗೆ ತಿಳಿಸಿದರು.

ಭರವಸೆ: ಕಾಲೇಜು ಬಳಿ ಇರುವ ಎರಡು ಬಸ್‌ ತಂಗುದಾಣಗಳು ಅಶು ಚಿತ್ವದಿಂದ ಕೂಡಿದ್ದು, ಕೂಡಲೆ ಸ್ವಚ್ಛಗೊಳಿ ಸುವಂತೆ ಕಾಲೇಜಿನ ಪ್ರಾಂಶುಪಾಲ ಡಾ.ದೇವರಾಜ್‌ ಅವರಿಗೆ ಸೂಚಿಸಿದರು. ಡಿಪೋ ವ್ಯವಸ್ಥಾಪಕರು ಬಸ್‌ ನಿಲುಗಡೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಮಹದೇವ್‌, ಡಾ. ಮಂಜುನಾಥ್‌, ಯಶಸ್ವಿನಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next