ಶಿರಸಿ: ಮಳೆಗಾಲದಲ್ಲಿ ಸಂಪೂರ್ಣ ಸೋರುವ ಸುಪ್ರಸಿದ್ಧ ಕ್ಷೇತ್ರ ಬನವಾಸಿ ಮಧುಕೇಶ್ವರ ದೇವಸ್ಥಾನ ದುರಸ್ತಿ ಕಾರ್ಯವನ್ನು ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭಿಸುವುದಾಗಿ ಹೇಳಿದ ಭಾರತೀಯ ಪುರಾತತ್ವ ಸರ್ವೆàಕ್ಷಣ ಇಲಾಖೆ ಹೇಳಿದ ಮಾತನ್ನು ಮರೆತು, ಸುದ್ದಿಯೇ ಇಲ್ಲದಂತೆ ಸುಮ್ಮನೆ ಕುಳಿತಿರುವುದನ್ನು ಬನವಾಸಿ ತಾಲೂಕು ಹೋರಾಟ ಸಮಿತಿ ಖಂಡಿಸಿದೆ.
ಈ ಕುರಿತು ಅಸಮಾಧಾನ ಹಂಚಿಕೊಂಡ ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ, ಗೌರವಧ್ಯಕ್ಷ ಸಿ.ಎಫ್. ನಾಯ್ಕ ಹಾಗೂ ಕಾರ್ಯದರ್ಶಿ ವಿಶ್ವನಾಥ ವಡೆಯರ್ ಕೂಡಲೇ ಇಲಾಖೆ ಶ್ರೀ ದೇವಸ್ಥಾನ ದುರಸ್ತಿ ಕಾರ್ಯ ಆರಂಭಿಸುವಂತೆ ಆಗ್ರಹಿಸಿದ್ದಾರೆ.
ಶ್ರೀ ದೇವಸ್ಥಾನ ಸಂಪೂರ್ಣ ಸೋರುತ್ತಿರುವುದನ್ನು ಕಳೆದ ಜುಲೈ ತಿಂಗಳ ಮೊದಲ ವಾರದಲ್ಲಿಯೇ ಹೋರಾಟ ಸಮಿತಿ ಇಲಾಖೆ ಗಮನಕ್ಕೆ ತಂದಿತ್ತು. ಪರಿಶೀಲನೆ ಮಾಡಿ ದುರಸ್ತಿ ಆರಂಭಿಸದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರ ನೀಡಿತ್ತು.
ಪತ್ರಿಕೆ ಹೇಳಿಕೆ ನೀಡಿ 15ದಿನಗಳ ಗಡುವು ಕೂಡ ನೀಡಿತ್ತು. ಆದರೆ ವರದಿ ಬಂದ 8ದಿನಗಳಲ್ಲಿ ಇಲಾಖೆ ಸಿ. ಎ. ವಿಜಯಕುಮಾರ ತಮ್ಮ ಸಿಬ್ಬಂದಿಗಳೊಂದಿಗೆ ಮಧುಕೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿ ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಮಳೆ ನಿಂತ ತಕ್ಷಣ ಅಕ್ಟೋಬರ್ ನಲ್ಲಿ ದುರಸ್ತಿ ಕಾರ್ಯ ಆರಂಭ ಮಾಡುವುದಾಗಿ ಹೇಳಿದ್ದರಿಂದ, ಹೋರಾಟ ಸಮಿತಿ ಪ್ರತಿಭಟನೆ ವಾಪಸ್ ಪಡೆದಿತ್ತು. ಆದರೆ ಇದೀಗ ಡಿಸೆಂಬರ್ ತಿಂಗಳು ಬಂದಿದೆ. ಇಲಾಖೆಯ ಈ ದಿವ್ಯ ನಿರ್ಲಕ್ಷ್ಯಕ್ಕೆ ಹೋರಾಟ ಸಮಿತಿ ಬೇಸರ ವ್ಯಕ್ತಪಡಿಸಿದೆ.
Related Articles
ಮಳೆಗಾಲದಲ್ಲಿ ಧಾರಾಕಾರವಾಗಿ ದೇವಸ್ಥಾನದಲ್ಲೆಲ್ಲ ನೀರು ಸೋರಿಕೆ ಎಂಥವರಿಗೂ ಮನ ಕಲುಕುತ್ತೆ. ದೇವಸ್ಥಾನದ ಇಂಚು ಇಂಚಿಗೂ ಸೋರುತ್ತೆ. ಈ ದೃಶ್ಯ ಭಕ್ತರಲ್ಲಿ, ದೂರದಿಂದ ಬರುವ ಯಾತ್ರಾರ್ಥಿಗಳಲ್ಲಿ ಬೇಸರ ಮೂಡಿಸುತ್ತಿದೆ. ಅನಾದಿಕಾಲದ ಶ್ರೀ ಮಧುಕೇಶ್ವರ ದೇವಸ್ಥಾನ ಈ ವರೆಗೂ ಅಷ್ಟೊಂದು ಚನ್ನಾಗಿ ಉಳಿದುಕೊಂಡು ಬಂದಿದೆ.
ಶಿಲೆಗಳಿಂದ ತುಂಬಿ ತುಳುಕುತ್ತಿರುವ ಈ ದೇವಸ್ಥಾನ ಅಷ್ಟೇ ಶಾಸನಗಳನ್ನು ಕೂಡ ಹೊಂದಿರುವ ಅಪರೂಪದ ದೇವಸ್ಥಾನ. ಕನ್ನಡದ ಪ್ರಥಮ ರಾಜಧಾನಿ ಬನವಾಸಿ ಕರ್ನಾಟಕ ರಾಜ್ಯಕ್ಕೆ ಮುಕುಟವಿದ್ದಂತೆ. ಇದು ಕೇವಲ ರಾಜ್ಯದ ಅಸ್ತಿ ಅಷ್ಟೇ ಅಲ್ಲ, ದೇಶದ ಆಸ್ತಿ ಕೂಡ. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಸಹಸ್ರಾರು ವರ್ಷಗಳ ಚಾರಿತ್ರಿಕ ಹಿನ್ನೆಲೆ ಜೊತೆಗೆ ಪೌರಾಣಿಕ ಹಿನ್ನೆಲೆ ಕೂಡ ಅದಕ್ಕಿದೆ ಎಂದು ಹೋರಾಟ ಸಮಿತಿ ಹೇಳಿಕೊಂಡಿದೆ.
ಈ ದೇವಸ್ಥಾನ ಸಂಪೂರ್ಣ ಭಾರತೀಯ ಪುರಾತತ್ವ ಸರ್ವೆàಕ್ಷಣ ಇಲಾಖೆ ಸುಪರ್ದಿಯಲ್ಲಿದೆ. ಅಲ್ಲಿ ಏನೇ ಕೆಲಸ ಮಾಡುವುದಾದರು ಈ ಇಲಾಖೆಯೇ ಮಾಡಬೇಕು. ಪುರಾತನ ಹಿನ್ನೆಲೆಯಲ್ಲಿ ಬನವಾಸಿ ದೇವಸ್ಥಾನಕ್ಕೆ ಸಿಗಬೇಕಾದ ಮಹತ್ವ ಸಿಗುತ್ತಿಲ್ಲ ಎನ್ನುವ ಆಕ್ಷೇಪ ಹೋರಾಟ ಸಮಿತಿ ಅವರದ್ದಾಗಿದೆ.
ಮಳೆಗಾಲದಲ್ಲಿ ಮಧುಕೇಶ್ವರ ದೇವಸ್ಥಾನ ಗರ್ಭ ಗುಡಿ, ಸಂಕಲ್ಪ ಮಂಟಪ, ದೊಡ್ಡ ದೊಡ್ಡ ಕಂಬಗಳ ಮೇಲಿಂದ ಸೋರಿಕೆ, ತ್ರಿಲೋಕ ಮಂಟಪದ ಹತ್ತಿರ, ನೃತ್ಯ ಮಂಟಪ, ಭಕ್ತರು ಕೂಡುವ ಆಸನಗಳ ಮೇಲೆ, ಪಾರ್ವತಿ ದೇವಸ್ಥಾನ, ಹಾಗೆ ಪ್ರಾಕಾರದಲ್ಲಿ ಎಲ್ಲೆಂದರಲ್ಲಿ ಸೋರಿಕೆ ಇದೆ. ಹಾಗಾಗಿ ಕೂಡಲೇ ಪುರಾತತ್ವ ಇಲಾಖೆ ಕೂಡಲೇ ದುರಸ್ತಿ ಕಾರ್ಯ ಪ್ರಾರಂಭಿಸಬೇಕು ಎಂದು ಹೋರಾಟ ಸಮಿತಿ ಆಗ್ರಹಿಸಿದೆ. ಇಲ್ಲದಿದ್ದಲ್ಲಿ ಬನವಾಸಿ ತಾಲೂಕು ಹೋರಾಟ ಸಮಿತಿ ಸಾರ್ವಜನಿಕವಾಗಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದೆ.