Advertisement

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹೆದ್ದಾರಿ ತಡೆ

12:22 PM May 25, 2022 | Team Udayavani |

ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಾಜಿ ಶಾಸಕ ಎನ್‌.ಎಚ್‌.ಕೋನರಡ್ಡಿ ನೇತೃತ್ವದಲ್ಲಿ ಮಂಗಳವಾರ ಶಿರಗುಪ್ಪಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಯಿತು.

Advertisement

ಬೆಣ್ಣಿಹಳ್ಳ ಪ್ರವಾಹ, ರೈತರ ಬೆಳೆವಿಮೆ ಹಾಗೂ ಬೆಳೆ ಪರಿಹಾರ ಬಿಡುಗಡೆ ಹಾಗೂ ಮನೆ ಬಿದ್ದವರಿಗೆ ಹೆಚ್ಚಿನ ಪರಿಹಾರ, ಶಿರಗುಪ್ಪಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಫ್ಲೈ ಓವರ್‌ ನಿರ್ಮಾಣ, ನಲವಡಿ ಟೋಲ್‌ ಪ್ಲಾಜಾದಲ್ಲಿ ಸ್ಥಳೀಯರಿಗೆ ಉಚಿತ ಸಂಚಾರಕ್ಕೆ ಅವಕಾಶ ಕೊಡಬೇಕು ಎನ್ನುವ ಬೇಡಿಕೆಗಳಿಗೆ ಒತ್ತಾಯಿಸಿ ಹೆದ್ದಾರಿ ತಡೆಗೆ ಕರೆ ನೀಡಲಾಗಿತ್ತು.ಸುಮಾರು 15 ನಿಮಿಷಗಳ ಕಾಲ ಪ್ರತಿಭಟನೆ ನಡೆಸಲಾಯಿತು. ತಹಶೀಲ್ದಾರ್‌ ಪ್ರಕಾಶ ನಾಶಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೆದ್ದಾರಿ ತಡೆ ವಾಪಸ್‌ ಪಡೆಯಲಾಯಿತು.

ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಮಾತನಾಡಿ, ಬೇಡಿಕೆಗಳಿಗೆ ಒತ್ತಾಯಿಸಿ ಹಲವು ಬಾರಿ ಹೋರಾಟಗಳನ್ನು ಮಾಡಲಾಗಿದೆ. ಸಾಕಷ್ಟು ಮನವಿಗಳನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಆದರೂ ರೈತರ ವಿಚಾರದಲ್ಲಿ ಇಷ್ಟೊಂದು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಬೆಣ್ಣಿ ಹಳ್ಳ ಹಾಗೂ ಅಕ್ಕಪಕ್ಕ ಇರುವ ಎಲ್ಲ ಹಳ್ಳಗಳನ್ನು ಅಗಲೀಕರಣ ಮಾಡಿ ಹಾಗೂ ಚೆಕ್‌ ಡ್ಯಾಂ ನಿರ್ಮಿಸಿ ರೈತರ ಜಮೀನುಗಳಿಗೆ ಹಾನಿಯಾಗದಂತೆ ಡಾ| ಪರಮಶಿವಯ್ಯ ವರದಿ ಜಾರಿಗೆ ಹಲವು ಬಾರಿ ಆಶ್ವಾಸನೆಗಳನ್ನು ನೀಡಲಾಗಿದೆ. ಸರಕಾರ ಈಗಾಗಲೇ ಸಿದ್ಧಪಡಿಸಿರುವ ಡಿಪಿಎಆರ್‌ಗೆ ಅನುಮೋದನೆ ನೀಡಿ ಹಾನಿ ತಪ್ಪಿಸಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕು. ಅತಿವೃಷ್ಟಿಯಿಂದ 2020-21ರಿಂದ 2022ರ ವರೆಗೆ ಬೆಳೆಹಾನಿಯಾದ ರೈತರಿಗೆ ಬೆಳೆಹಾನಿ ಹಾಗೂ ಬೆಳೆವಿಮೆ ಪರಿಹಾರ ಕೆಲವರಿಗೆ ಮಾತ್ರ ಬಿಡುಗಡೆ ಮಾಡಿದ್ದು, ಅರ್ಧಕ್ಕಿಂತ ಹೆಚ್ಚು ಉಳಿದ ರೈತರಿಗೆ ಪರಿಹಾರ ಬಿಡುಗಡೆ ಆಗಿಲ್ಲ. ಮನೆ ಬಿದ್ದವರಿಗೆ ಇಲ್ಲಿಯವರೆಗೆ ಪರಿಹಾರ ನೀಡಿಲ್ಲ ಎಂದು ದೂರಿದರು.

ಅಣ್ಣಿಗೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಮಾಯಣ್ಣವರ, ಮುಖಂಡರಾದ ಪ್ರಕಾಶಗೌಡ್ರ ಹನಮರಡ್ಡಿ, ಶಿವಣ್ಣ ಹುಬ್ಬಳ್ಳಿ, ಮಲ್ಲಪ್ಪನವರು ಅಣ್ಣಿಗೇರಿ, ವೆಂಕಣ್ಣ ಹನಮರಡ್ಡಿ, ಗುರುಪಾದಪ್ಪ ದೇಸಾಯಿ, ಡಾ| ತಾಜುದ್ದೀನ ಮುಲ್ಲಾನವರ, ಜಕ್ಕಪ್ಪ ಮಲ್ಲಾಡದ, ಡಿ.ಜಿ. ಜಂತ್ಲಿ, ಬಸವರಾಜ ಬೀರಣ್ಣವರ, ಈಶ್ವರಯ್ಯ ಶಿಡಗಂಟಿ, ಪ್ರದೀಪ ಲೆಂಕನಗೌಡ್ರ, ಬಸವರಾಜ ಭಗವತಿ, ಗುರುನಾಥ ಹಳ್ಳೂರ, ಮಹಾಂತಪ್ಪ ಹುಬ್ಬಳ್ಳಿ, ದ್ಯಾವಪ್ಪ ಮೂಲಿಮನಿ, ಪದ್ಮರಾಜ ಬಾಳಪ್ಪನವರ ಇನ್ನಿತರರಿದ್ದರು.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next