ವಿಜಯಪುರ: ಸರ್ಕಾರಿ ನೌಕರರಿಗೆ ರಕ್ಷಣೆ ನೀಡಿ ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ವಿಜಯಪುರ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಜೀಬಿ ಮಾತನಾಡಿ, ಇತ್ತೀಚೆಗೆ ಸರ್ಕಾರಿ ನೌಕರರ ಮೇಲೆ ಹಲ್ಲೆ ಪ್ರಕರಣಗಳು ನಡೆಯುತ್ತಿರುವುದು ನೋವಿನ ಸಂಗತಿ. ಹುಮನಾಬಾದನಲ್ಲಿ ಕರ್ತವ್ಯನಿರತ ತಹಶೀಲ್ದಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದಾಂಧಲೆ ಮಾಡಿರುವುದು ಖಂಡನೀಯ ಎಂದರು.
ಸಭೆಯಲ್ಲಿದ್ದ ತಹಶೀಲ್ದಾರ್ ತಮ್ಮ ಮನವಿ ಸ್ವೀಕರಿಸಲು ಬರಲಿಲ್ಲ ಎಂಬ ಕಾರಣವೊಡ್ಡಿ ತಹಶೀಲ್ದಾರ್ ಕಚೇರಿಯ ಕುರ್ಚಿಗಳನ್ನು ಎತ್ತಿ ಬಿಸಾಡಿ, ಭಯ ಭೀತಿ ವಾತಾವರಣ ಉಂಟು ಮಾಡಿದ್ದಾರೆ. ಅಲ್ಲದೇ ಹಲ್ಲೆ ನಡೆಸಿರುವುದು ಖಂಡನಾರ್ಹ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅಕ್ರಮಣಕಾರಿ ಮನೋಭಾವದೊಂದಿಗೆ ಕಾನೂನು ಕೈಗೆ ತೆಗೆದುಕೊಳ್ಳುವುದು ಅಪಾಯಾಕಾರಿ ಎಂದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಚಂದ್ರಶೇಖರ ಲೆಂಡಿ ಮಾತನಾಡಿ, ತಾಲೂಕು ದಂಡಾಧಿಕಾರಿಯ ಸ್ಥಿತಿಯೇ ಹೀಗಾದಲ್ಲಿ ಸಾಮಾನ್ಯ ನೌಕರರ ಮೇಲೆ ನಾನಾ ಸ್ತರಗಳಿಂದ ಇಂತಹ ಹಲ್ಲೆಗಳು ಹೆಚ್ಚಾಗುತ್ತಿರುವುದನ್ನು ಗಮನಿಸಬಹುದಾಗಿದೆ. ಕರ್ತವ್ಯನಿರತ ಅಧಿಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿ ಹಲ್ಲೆ ನಡೆಸುವ ಪ್ರವೃತ್ತಿಗೆ ಸರ್ಕಾರ ಕಡಿವಾಣ ಹಾಕಬೇಕಿದೆ. ರಾಜ್ಯ ಸರ್ಕಾರ ನೌಕರರು ನಿರ್ಭೀತರಾಗಿ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಬೇಕು ಮತ್ತು ನೌಕರರಿಗೆ ರಕ್ಷಣೆ ನೀಡುವ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಹಲ್ಲೆಕೋರರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸೋಮು ಹೀರಲಗಿ, ಭೀಮಣ್ಣ ಹೊನ್ನಾಳ, ಈಶ್ವರಪ್ಪ, ಕಿರಣ ದೇಸಾಯಿ, ಸತೀಶ ಕಬಾಡೆ, ಎಂ.ಎಸ್. ಕಂದಗಲ್, ಅರುಣ ರಾಠೊಡ, ಜೆ.ಬಿ. ಅಂಗಡಿ, ಆರ್.ಎಸ್. ಮೆಣಸಗಿ ಇದ್ದರು.