ಹೊಸದಿಲ್ಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಬಂಧನದ ವರೆಗೂ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಕುಸ್ತಿಪಟುಗಳು ಪಟ್ಟು ಹಿಡಿದಿದ್ದಾರೆ.
ಇದರ ಮಧ್ಯೆಯೇ ಕುಸ್ತಿಪಟುಗಳು ಸಲ್ಲಿಸಿದ್ದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಬ್ರಿಜ್‌ಭೂಷಣ್ ವಿರುದ್ಧ ದಿಲ್ಲಿ ಪೊಲೀಸರು ಇಂದೇ ಎಫ್ಐಆರ್ ದಾಖಲಿಸುತ್ತಾರೆ ಎಂದು ಮಾಹಿತಿ ನೀಡಿದರು. ಸಿಜೆಐ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ನ್ಯಾಯಪೀಠ ವಿಚಾರಣೆಯನ್ನು ಮೇ 5ಕ್ಕೆ ಮುಂದೂಡಿತು.
ಪ್ರತಿಭಟನೆ ನಿಲ್ಲದು
“ಬ್ರಿಜ್‌ಭೂಷಣ್ ಮೇಲಿನ ಎಫ್ಐಆರ್, ನಮ್ಮ ಮೊದಲ ಜಯವಾಗಿದೆ. ಆದರೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ಅವರನ್ನು ಎಲ್ಲ ಹುದ್ದೆಗಳಿಂದ ಕಿತ್ತು ಹಾಕಬೇಕು. ಅಲ್ಲಿಯ ವರೆಗೆ ನಮ್ಮ ಪ್ರತಿಭಟನೆ ನಡೆಯತ್ತಲೇ ಇರುತ್ತದೆ” ಎಂದಿದ್ದಾರೆ ಕುಸ್ತಿಪಟುಗಳು.
ಪತ್ರಕರ್ತರೊಂದಿಗೆ ಮಾತನಾಡಿದ ಸಾಕ್ಷಿ ಮಲಿಕ್, ವಿನೇಶ್ ಫೋಗಾಟ್, ಭಜರಂಗ್ ಪುನಿಯ ಅವರೆಲ್ಲ, “ಬ್ರಿಜ್‌ಭೂಷಣ್ ಅಲಂಕರಿಸಿರುವ ಎಲ್ಲ ಹುದ್ದೆಗಳಿಂದಲೂ ಕಿತ್ತು ಹಾಕಬೇಕು. ಜತೆಗೆ ಅವರನ್ನು ಈ ಕೂಡಲೇ ಬಂಧಿಸಬೇಕು. ದಿಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಲು ತಡ ಮಾಡಿದ್ದರಿಂದ ನಮಗೆ ಪೊಲೀಸರ ಮೇಲೆ ನಂಬಿಕೆಯೇ ಹೋಗಿದೆ’ ಎಂದು ಹೇಳಿದ್ದಾರೆ.
“ಒಂದು ವೇಳೆ ಬ್ರಿಜ್‌ಭೂಷಣ್‌ರನ್ನು ಜೈಲಿಗೆ ಹಾಕದಿದ್ದರೆ ಅವರು ಪೊಲೀಸರ ಮೇಲೆಯೇ ಪ್ರಭಾವ ಬಳಸುತ್ತಾರೆ. ಇಡೀ ಪ್ರಕರಣ ದಿಕ್ಕು ತಪ್ಪುವಂತೆ ಮಾಡುತ್ತಾರೆ’ ಎಂದಿದ್ದಾರೆ.