ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಮೀಸಲು ಪ್ರದೇಶವೆಂದು ಜಿಲ್ಲಾಡಳಿತ ಘೋಷಿಸಿ ಸಚಿವ ಸಂಪುಟದ ಒಪ್ಪಿಗೆಗೆ ಕಳಿಸಿದ್ದು ಮೀಸಲು ಪ್ರದೇಶ ಘೋಷಣೆ ವಿರೋಧಿ ಸಿ ಮಾ.3ರಂದು ಬೆಳಗ್ಗೆ 10:30ಕ್ಕೆ ತಾಲೂಕು ಕಚೇರಿ ಆವರಣದಿಂದ ಆಜಾದ್ ಪಾರ್ಕ್ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸ ಲಾಗುವುದು ಎಂದು ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್. ವಿಜಯಕುಮಾರ್ ತಿಳಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಳ್ಳಯ್ಯನಗಿರಿ ಮೀಸಲು ಪ್ರದೇಶ ಘೋಷಣೆ ಸಂಬಂಧ ಫೆ.24ರಂದು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ಸರ್ವಪಕ್ಷಗಳ ಸಭೆ ಕರೆಯಲಾಗಿದೆ ಎಂದರು.
ಮುಳ್ಳಯ್ಯನಗಿರಿ ಪ್ರದೇಶ 9 ಸಾವಿರ ಹೆಕ್ಟೇರ್ ಡೀಮ್ಡ್ ಅರಣ್ಯಪ್ರದೇಶವಾಗಿದೆ. 8 ಗ್ರಾಪಂ ವ್ಯಾಪ್ತಿಯ 15,897 ಹೆಕ್ಟೇರ್ ಮೀಸಲು ಅರಣ್ಯವನ್ನಾಗಿಸಿದರೆ ಮೀಸಲು ಅರಣ್ಯದಲ್ಲಿ ಅನ್ವಯವಾಗುವ ಎಲ್ಲಾ ಕಾನೂನುಗಳು ಅನ್ವಯವಾಗುತ್ತದೆ. ಯೋಜನೆ ಜಾರಿಗೊಳಿಸುವ ಮೊದಲು ಜನರ ಅಹವಾಲು ಸರ್ಕಾರ ಆಲಿಸಿ ನೆರವಿಗೆ ಮುಂದಾಗಬೇಕು ಎಂದು ತಿಳಿಸಿದರು.
ಮುಳ್ಳಯ್ಯನಗಿರಿ ಮೀಸಲು ಪ್ರದೇಶ ಘೋಷಣೆ ವಿರುದ್ಧ 7 ಗ್ರಾಪಂಗಳು ನಿರ್ಣಯ ಕೈಗೊಂಡಿದ್ದರೂ ಸಚಿವ ಸಂಪುಟದ ಮುಂದೆ ಒಪ್ಪಿಗೆಗೆ ಇರಿಸಲಾಗಿದೆ. ಮಲೆನಾಡಿನ ಜನರ ಜೀವನದ ಬಗ್ಗೆ ಅಪಾರ ಜ್ಞಾನ ಹೊಂದಿಲ್ಲದ ಬಹುತೇಕ ಸಚಿವರು ಒಪ್ಪಿಗೆ ನೀಡಿದರೆ ಜನರ ಬದುಕು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಹೇಳಿದರು.
ಗಿರಿಪ್ರದೇಶದ ಜನರು ಪರಿಸರ ವಿರೋಧಿಗಳಲ್ಲ, ನಾವು ಪರಿಸರ ರಕ್ಷಕರು. ಯೋಜನೆ ಜಾರಿಗೂ ಮೊದಲು ಗ್ರಾಮಗಳಿಗೆ ಮೀಸಲಿಟ್ಟಿರುವ ಸ್ಮಶಾನ, ರಸ್ತೆ, ಶಾಲೆ ಅಂಗನವಾಡಿ, ಗೋಮಾಳ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಜಾಗ ಗುರುತಿಸಿ ಬಾಂಧು ಹಾಕಿಸಬೇಕು. ಕಂದಾಯ ಮತ್ತು ಅರಣ್ಯ ಪ್ರದೇಶದ ಜಂಟಿ ಸರ್ವೇ ಆಗಬೇಕು ಹಾಗೂ 50, 53, 57, 94ಸಿ, 94ಸಿಸಿ ಅರ್ಜಿ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ಸಂಚಾಲಕರಾದ ಕೆ.ಕೆ. ರಘು, ಕೆ.ಪಿ. ಪ್ರವೀಣ್, ಶಾಂತಕುಮಾರ್ ಇದ್ದರು.