ಹಿರೇಕೆರೂರ: ರೈತರ ಕೃಷಿಸಾಲ ಸಂಪೂರ್ಣ ಮನ್ನಾ ಮಾಡುವುದು, ಬೆಳೆ ವಿಮಾ ಹಣ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಆಗಸ್ಟ್ 19 ರಂದು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.
ರಟ್ಟೀಹಳ್ಳಿಯ ಪ್ರವಾಸಿ ಮಂದಿರದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಜನತೆ ಮಹಾಮಳೆಯಿಂದ ತತ್ತರಿಸಿದ್ದು, ಮಳೆಯ ತೀವ್ರತೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಜನರು ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಬೆಳೆಹಾನಿಯಾಗಿದ್ದು, ಧನಕರುಗಳು ಸಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರ ಸಂತ್ರಸ್ತರ ಸಂಪೂರ್ಣ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಕಳೆದ 4-5 ವರ್ಷದಿಂದ ಬರಗಾಲದಿಂದ ಜಿಲ್ಲೆಯ ರೈತರು ತತ್ತರಿಸಿದ್ದರು. ಈ ವರ್ಷ ವಿಳಂಬವಾದರೂ ಉತ್ತಮ ಮಳೆ ಪ್ರಾರಂಭವಾಗಿತ್ತು. ಇದರಿಂದ ರೈತರು ಹರ್ಷಗೊಂಡಿದ್ದರು. ಆದರೆ ರೈತರ ಹರ್ಷ ಬಹಳದಿನ ಉಳಿಯದಂತೆ ಮಹಾ ಮಳೆ ಅವಾಂತರ ಸೃಷ್ಟಿಸಿ ಬಿಟ್ಟಿದೆ. ಜಿಲ್ಲೆಯಲ್ಲಿನ ನದಿಗಳು ಉಕ್ಕಿ ಹರಿದು ಸಾಕಷ್ಟು ಬೆಳೆಹಾನಿಯಾಗಿದೆ ಕೂಡಲೇ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ರೈತರ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ರೈತರು, ರೈತ ಕಾರ್ಮಿಕರು, ರೈತ ಮಹಿಳೆಯರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ರಟ್ಟೀಹಳ್ಳಿ ತಾಲೂಕು ಘಟಕದ ಅಧ್ಯಕ್ಷ ಶಂಕರಗೌಡ ಶಿರಗಂಬಿ, ಮಲ್ಲನಗೌಡ ಮಾಳಗಿ, ಮಹೇಂದ್ರಪ್ಪ ತಳವಾರ, ಶಂಭು ಮುತ್ತಗಿ, ಪ್ರಶಾಂತ ದ್ಯಾವಕ್ಕಳವರ, ಮಂಜು ಬಾಗೋಡಿ, ಫಯಾಜ್‌ಸಾಬ ದೊಡ್ಡಮನಿ, ಗದಿಗೆಪ್ಪ ಮಳಗೊಂಡರ, ರುದ್ರೇಶ ದ್ಯಾವಕ್ಕಳವರ ಇನ್ನಿತರರಿದ್ದರು.